ಮಾಡಾವು ಸಬ್‌ಸ್ಟೇಷನ್ ಪೂರ್ಣಗೊಂಡರೆ ವಿದ್ಯುತ್ ಕಡಿತ ಸಮಸ್ಯೆ ಪರಿಹಾರ: ಮೆಸ್ಕಾಂ ಇಂಜಿನಿಯರ್
ಪುತ್ತೂರು, ಫೆ.22: ಪದೇ ಪದೇ ವಿದ್ಯುತ್ ಕಡಿತವಾಗುತ್ತಿರುವುದಕ್ಕೆ ಸಭ್‌ಸ್ಟೇಷನ್ ಒತ್ತಡವೂ ಕಾರಣವಾಗಿದ್ದು, ಮಾಡಾವು ಎಂಬಲ್ಲಿ ನಿರ್ಮಾಣವಾಗುತ್ತಿರುವ ಸಬ್‌ಸ್ಟೇಷನ್ ಕಾಮಗಾರಿ ಪೂರ್ಣಗೊಂಡಾಗ ಒತ್ತಡ ನಿವಾರಣೆಯಾಗಿ ವಿದ್ಯುತ್ ಕಡಿತ ಸಮಸ್ಯೆ ಬಹುತೇಕ ಪರಿಹಾರವಾಗಲಿದೆ ಎಂದು ಮೆಸ್ಕಾಂ ಪುತ್ತೂರು ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಪೂಜಾರಿ ತಿಳಿಸಿದರು.
ಅವರು ಬುಧವಾರ ತಾ.ಪಂ. ಸಭಾಂಗಣದಲ್ಲಿ ನಡೆದ ಪುತ್ತೂರು ಮೆಸ್ಕಾಂ ಗ್ರಾಮಾಂತರ ಉಪವಿಭಾಗದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಪುತ್ತೂರು ಉಪವಿಭಾಗದ ಮೆಸ್ಕಾಂ ವ್ಯಾಪ್ತಿಯು ಪುತ್ತೂರು ಮತ್ತು ಸುಳ್ಯ ತಾಲೂಕುಗಳನ್ನು ಒಳಗೊಂಡಿಎ. ಇಲ್ಲಿ 110ಕವಿ ಮತ್ತು 33/11ಕೆವಿಯ 8 ಸಬ್‌ಸ್ಟೇಷನ್‌ಗಳಿದ್ದು, ಒಟ್ಟು 70 ಎಂವಿ ವಿದ್ಯುತ್ ಬೇಡಿಕೆಯಿದೆ. ಆದರೆ ಬನ್ನೂರು ಮೆಸ್ಕಾಂನಲ್ಲಿ 40 ಎಂವಿ ಸಾಮರ್ಥ್ಯದ ಪರಿವರ್ತಕ ಮಾತ್ರವಿದೆ ಇದರಿಂದಾಗಿ ಏಕ ಕಾಲದಲ್ಲಿ ಎಲ್ಲಾ ಫೀಡರ್‌ಗಳಿಂದ ವಿದ್ಯುತ್ ಹರಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ವಾಹಕದಲ್ಲಿ ಒಂದು ಅಥವಾ ಅರ್ಧ ತಾಸು ವ್ಯತ್ಯಯ ಉಂಟಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಾಡಾವು ಸಬ್‌ಸ್ಟೇಷನ್ ಕಾಮಗಾರಿ ಶೇ. 80ರಷ್ಟು ಪೂರ್ಣಗೊಂಡಿದೆ. ಮುಂದಿನ 6 ತಿಂಗಳ ಒಳಗಾಗಿ ಈ ಸಬ್‌ಸ್ಟೇಷನ್ ಕಾರ್ಯಾರಂಭ ಮಾಡಲಿದೆ ಎಂದ ಅವರು ಇದರಿಂದ ಬಹುತೇಕ ಒತ್ತಡ ನಿವಾರಣೆಯಾಗಲಿದೆ. ವಿದ್ಯುತ್ ಸಮಸ್ಯೆ ಪರಿಹಾರವಾಗಲಿದೆ ಎಂದರು.
ತೋಟದ ಒಳಗಡೆ ಹಾದು ಹೋಗುತ್ತಿರುವ ವಿದ್ಯುತ್ ತಂತಿಗಳಿಂದ ಹಲವಾರು ಅನಾಹುತಗಳು, ಜೀವಹಾನಿ ಸಂಭವಿಸಿರುವ ಬಗ್ಗೆ ಗ್ರಾಹಕರ ಪ್ರಶ್ನೆಗೆ ಉತ್ತರಿಸಿದ ಅವರು ತೋಟಗಳ ಮತ್ತು ಖಾಸಗಿ ಜಮೀನುಗಳ ನಡುವೆ ಹಾದು ಹೋಗುತ್ತಿರುವ ವಿದ್ಯುತ್ ತಂತಿಗಳಿಗೆ ಕೇಬಲ್ ಅಳವಡಿಸಲು ಇಲಾಖೆಯಿಂದ ಅವಕಾಶಗಳಿಲ್ಲ. ಈ ಭಾಗದ ಜನರೇ ಸ್ವಯಂ ಜಾಗೃತಿಯಿಂದ ಕೇಬಲ್ ಅಳವಡಿಕೆ ಮಾಡಿಕೊಳ್ಳಬೇಕು. ಕೃಷಿ ಉತ್ಪನ್ನಗಳ ಕಟಾವಿನ ಸಂದರ್ಭದಲ್ಲಿ ಒಂದೆರಡು ತಾಸು ವಿದ್ಯುತ್ ಕಡಿತಗೊಳಿಸಲು ಅವಕಾಶಗಳಿವೆ. ಆದರೆ ಇದಕ್ಕೆ ಕೃಷಿಕರ ಬೇಡಿಕೆ ಬಂದಾಗ ಮಾತ್ರ ಮಾಡಲಾಗುವುದು ಎಂದರು.
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯೆ ಫೌಝಿಯಾ, ಮೆಸ್ಕಾಂ ಅಧಿಕಾರಿಗಳಾದ ರಾಮಚಂದ್ರ, ಪ್ರಶಾಂತ್ ಪೈ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.