×
Ad

ನಾಗರಾಜ್ ಆರೋಪದಲ್ಲಿ ಹುರುಳಿಲ್ಲ: ಫಾ.ಡೆನ್ನಿಸ್ ಡೇಸಾ ಸ್ಪಷ್ಟನೆ

Update: 2017-02-22 19:25 IST

ಉಡುಪಿ, ಫೆ.22: ಅಶಿಸ್ತು, ದುರ್ನಡತೆಯಿಂದ ವರ್ತಿಸುತ್ತಿದ್ದ ಕಲ್ಯಾಣ ಪುರ ಸಂತೆಕಟ್ಟೆ ವೌಂಟ್ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕ ನಾಗರಾಜ್‌ಗೆ ಮುಖ್ಯ ಶಿಕ್ಷಕಿ ಸಿಸ್ಟರ್ ರೆಜಿನಾ ಮಿರಾಂದಾ ತಿಳಿಹೇಳಿ ಅವರ ನಡವಳಿಕೆಯನ್ನು ತಿದ್ದುವ ಕೆಲಸ ಮಾಡಿದ್ದಾರೆಯೇ ಹೊರತು ಮಾನಸಿಕ ಕಿರುಕುಳ, ಜಾತಿ ನಿಂದನೆ, ಕೊಲೆ ಬೆದರಿಕೆ, ಆತ್ಮಹತ್ಯೆ ಪ್ರಚೋದನೆ ಮಾಡಿದ್ದಾರೆಂಬ ನಾಗರಾಜ್ ಆರೋಪದಲ್ಲಿ ಹುರುಳಿಲ್ಲ. ಈ ಎಲ್ಲ ಆಪಾದನೆಗಳು ನೂರಕ್ಕೆ ನೂರು ಸುಳ್ಳು ಎಂದು ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂರ್ಪಕ ಅಧಿಕಾರಿ ಫಾ.ಡೆನ್ನಿಸ್ ಡೇಸಾ ಸ್ಪಷ್ಟಪಡಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 14ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ನಾಗ ರಾಜ್ ಅವರ ಅಶಿಸ್ತು, ದುರ್ನಡತೆಯಿಂದ ಆಡಳಿತ ಮಂಡಳಿ ಅವರಿಗೆ ಹಲವು ಬಾರಿ ವೌಖಿಕ ಎಚ್ಚರಿಕೆ ನೀಡಿತ್ತು. ಶಿಸ್ತಿಗೆ ಆದ್ಯತೆ ನೀಡುವ ಉತ್ತಮ ಆಡಳಿತಗಾರರಾದ ಹೊಸ ಮುಖ್ಯ ಶಿಕ್ಷಕಿ ನಾಗರಾಜ್‌ರ ಕುಕೃತ್ಯಗಳಿಗೆ ಕಣ್ಣು ಮುಚ್ಚಿ ಕೂರದೆ ಕ್ರಮಕ್ಕೆ ಮುಂದಾಗಿದ್ದರು. ಇದೇ ಕಾರಣಕ್ಕೆ ನಾಗರಾಜ್ ಮುಖ್ಯ ಶಿಕ್ಷಕಿಯ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಪೋಷಕರನ್ನು ಎತ್ತಿಕಟ್ಟಲು ಯತ್ನಿಸಿದ್ದರು ಎಂದು ದೂರಿದರು.

ಆತ್ಮಹತ್ಯೆ ಯತ್ನಿಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ನಾಗರಾಜ್, ಫಾ. ಲೊರೆನ್ಸ್ ಡಿಸೋಜ, ಫಾ.ಫಿಲಿಪ್ ನೆರಿ ಆರಾನ್ಹಾ ಹಾಗೂ ಸಿಸ್ಟರ್ ರೆಜಿನಾ ವಿರುದ್ಧ ಸುಳ್ಳು ಆರೋಪ ಹೊರಿಸಿ ಕೇಸು ದಾಖಲಿಸಿದ್ದಾರೆ. ನಾಗರಾಜ್ ತಮ್ಮ ಸ್ವಾರ್ಥ ಸಾಧನೆ, ಸೇಡು ಹಾಗೂ ಕುಕೃತ್ಯಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ಮುಖ್ಯ ಶಿಕ್ಷಕಿ ಹಾಗೂ ಆಡಳಿತ ವರ್ಗದ ವಿರುದ್ಧ ರೂಪಿಸಿದ ಷಡ್ಯಂತ್ರವಿದು. ಆದುದರಿಂದ ಯಾವುದೇ ವದಂತಿ ಹಾಗೂ ಊಹಾ ಪೋಹಾಗಳಿಗೆ ಯಾರು ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಫಾ.ವೆಲೇರಿಯನ್ ಮೆಂಡೋನ್ಸಾ, ಚರ್ಚ್ ಪಾಲನಾ ಮಂಡಳಿಯ ರೋನಾಲ್ಡ್ ಸಲ್ದಾನ, ಶಿಕ್ಷಕ ರಕ್ಷಕ ಸಂಘದ ರವಿ ಆಚಾರ್ಯ, ಶಿಕ್ಷಕಿಯರಾದ ಸವಿತಾ, ವನಿತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News