ಪುತ್ತೂರು: ಹೆಲ್ಮೆಟ್ ಧರಿಸುವಂತೆ ಹೂ ನೀಡಿ ಜಾಗೃತಿ ಮೂಡಿಸಿದ ಪೊಲೀಸರು!

Update: 2017-02-22 14:15 GMT

ಪುತ್ತೂರು, ಫೆ.22: ಕಳೆದ ಎಪ್ರಿಲ್ ತಿಂಗಳಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಸಹ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದರೂ, ಅದನ್ನು ಧರಿಸದೆ ವಾಹನ ಚಲಾಯಿಸುತ್ತಿರುವ ಚಾಲಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಠಾಣಾ ವ್ಯಾಪ್ತಿಯ 17 ಗ್ರಾಮಗಳಿಗೆ ತೆರಳಿ ಹೆಲ್ಮೆಟ್ ಧಾರಣೆ ಮಾಡದ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಿದ್ದಾರೆ.

ಬುಧವಾರದಂದು ಬೆಳಗ್ಗೆ ಸಂಪ್ಯ ಠಾಣಾ ಬಳಿ ಈ ಕಾರ್ಯಕ್ರಮಕ್ಕೆ ಸಂಪ್ಯ ಠಾಣಾ ಎಸ್ ಐ ಅಬ್ದುಲ್‌ಖಾದರ್ ಚಾಲನೆ ನೀಡಿದರು.

ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಚಾಲಕರನ್ನು ನಿಲ್ಲಿಸಿ ಅವರ ಕೈಗೆ ಗುಲಾಬಿ ಕೊಟ್ಟು ಹೆಲ್ಮೆಟ್ ದರಿಸುವಂತೆ ಪ್ರೇರಣೆ ನೀಡಿದರು. ಸುಪ್ರಿಂಕೋರ್ಟು ಕಡ್ಡಾಯ ಕಾನೂನು ಜಾರಿ ಮಾಡಿರುವುದು ಪ್ರತಿಯೊಬ್ಬ ಸವಾರನ ರಕ್ಷಣೆಗಾಗಿ , ಅಪಘಾತ ಸಂದರ್ಭದಲ್ಲಿ ಹೆಲ್ಮೆಟ್ ನಿಮ್ಮನ್ನು ಕಾಪಾಡುತ್ತದೆ , ದೇಶದ ಕಾನೂನನ್ನು ಪಾಲನೆ ಮಾಡುವುದು ಮತ್ತು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಕಾನೂನು ಪಾಲನೆ ಮಾಡದೇ ಇದ್ದಲ್ಲಿ ದಂಡ ಹಾಕಬಹುದಾಗಿದ್ದು ಒಂದು ವಾರಗಳ ಕಾಲ ಯಾವುದೇ ದಂಡವನ್ನು ವಿಧಿಸುವುದಿಲ್ಲ, ಕೇವಲ ಎಚ್ಚರಿಕೆಯನ್ನು ಮಾತ್ರ ನೀಡುವುದಾಗಿ ಖಾದರ್ ಹೇಳಿದರು.

ಗುಲಾಬಿ ಸ್ವೀಕರಿಸಿದ ಸವಾರರು ಮುಂದಿನ ದಿನಗಳಲ್ಲಿ ತಪ್ಪದೆ ಹೆಲ್ಮೆಟ್ ಹಾಕಿಯೇ ವಾಹನ ಚಲಾಯಿಸುವುದಾಗಿ ಪ್ರಮಾಣ ಮಾಡಿದರು.

ಸುಮಾರು ಅರ್ಧ ಗಂಟೆಗಳ ಕಾಲ ಮಾಣಿ- ಮೈಸೂರು ರಾ. ಹೆದ್ದಾರಿಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಒಂದು ವಾರಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು ಒಳಮೊಗ್ರು, ಕೆದಂಬಾಡಿ, ಬೆಟ್ಟಂಪಾಡಿ, ಕೆಯ್ಯೂರು, ಸರ್ವೆ, ಮುಂಡೂರು, ನೆಟ್ಟಣಿಗೆ ಮುಡ್ನೂರು, ಪಡುವನ್ನೂರು, ಬಡಗನ್ನೂರು, ಅರಿಯಡ್ಕ, ಪಾಣಾಜೆ, ನಿಡ್ಪಳ್ಳಿ, ಆರ್ಯಾಪು, ಕುರಿಯ, ಮಾಡ್ನೂರು ಸೇರಿದಂತೆ ಒಟ್ಟು 17 ಗ್ರಾಮ ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಲ್ಮೆಟ್ ಧರಿಸದೇ ಇದ್ದಲ್ಲಿ ದಂಡ ವಿಸಲಾಗುತ್ತದೆ 
 ಹೆಲ್ಮೆಟ್ ಕಡ್ಡಾಯ ವಿಚಾರ ಎಲ್ಲರಿಗೂ ತಿಳಿದಿದೆ, ಪ್ರಾರಂಭದಲ್ಲಿ ಎಲ್ಲರೂ ಹೆಲ್ಮೆಟ್ ದರಿಸಿಯೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರು. ಆದರೆ ಕೆಲವು ದಿನಗಳಿಂದ ಹಲವು ಮಂದಿ ಹೆಲ್ಮೆಟ್ ದರಿಸಿದೆ ವಾಹನ ಚಲಾಯಿಸುತ್ತಿದ್ದಾರೆ. ಅವರಿಗೆ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಿದ್ದೇವೆ. ಕಾನೂನು ಪಾಲನೆ ಮಾಡುವಂತೆಯೂ ವಿನಂತಿಸಿದ್ದೇವೆ. ವಾರಗಳ ಕಾಲ 17 ಗ್ರಾಮ ವ್ಯಾಪ್ತಿಯಲ್ಲಿ ಜಾಗೃತಿ ನಡೆಯಲಿದೆ. ಬಳಿಕವೂ ಹೆಲ್ಮೆಟ್ ಧರಿಸದೇ ಇದ್ದಲ್ಲಿ ದಂಡ ವಿಸಲಾಗುತ್ತದೆ .

ಅಬ್ದುಲ್ ಖಾದರ್ , ಸಂಪ್ಯ ಠಾಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News