80 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ: ಶಾಸಕ ಬಾವ

Update: 2017-02-22 14:38 GMT

ಮಂಗಳೂರು, ಫೆ. 22: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ರಸ್ತೆಗಳ ಅಭಿವೃದ್ಧಿಗೆ ಸುಮಾರು 80 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಬಿ.ಎ.ಮೊಯ್ದೀನ್ ಬಾವ ಹೇಳಿದರು.

 ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆಗಳನ್ನು ಮೆಲ್ದರ್ಜೆಗೇರಿಸಲು ಸಚಿವ ಮಹಾದೇವಪ್ಪ 15 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. 'ನಮ್ಮ ಗ್ರಾಮ ನಮ್ಮ ರಸ್ತೆ' ಯೋಜನೆಯಡಿ ಮೊದಲ ಹಂತದಲ್ಲಿ 10 ಗ್ರಾಮಗಳ 21 ಕಿ.ಮೀ. ರಸ್ತೆಯನ್ನು 26 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಎರಡನೇ ಹಂತದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅಡ್ಡೂರಿನ ಒಳರಸ್ತೆಗಳ ಅಭಿವೃದ್ಧಿ ನಡೆಯಲಿದೆ. ಶೀಘ್ರ ಟೆಂಡರ್ ಕರೆದು ಒಂದು ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದರು.

ಕೈಕಂಬ-ಏರ್‌ಪೋರ್ಟ್ ಸಂಪರ್ಕ ರಸ್ತೆ ಅಭಿವೃದ್ಧಿ: 
ಕೈಕಂಬದಿಂದ ಅದ್ಯಪಾಡಿ ಮಾರ್ಗವಾಗಿ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಯನ್ನು 20 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗಿದ್ದು, ಎರಡು ಕೋಟಿ ರೂ. ವೆಚ್ಚದ ಕಾಮಗಾರಿ ಬಾಕಿ ಇದೆ. ಉದ್ದೇಶಿತ ಕಾಮಗಾರಿ ಪೂರ್ಣಗೊಂಡರೆ, ಮೂಡುಬಿದಿರೆ, ಕೈಕಂಬ ಪ್ರದೇಶದಿಂದ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಹತ್ತಿರವಾಗಲಿಗೆ ಎಂದು ಬಾವ ತಿಳಿಸಿದರು.

 ಬಜಪೆ ಸೌಹಾರ್ದ  ನಗರದ ಮುರಾ ವೃತ್ತದಿಂದ ಪೊಲೀಸ್ ಠಾಣೆ ವರೆಗಿನ ರಸ್ತೆಯ ಅಭಿವೃದ್ಧಿಗೆ 1.5 ಕೋಟಿ ರೂ. ಹಾಗೂ ಪೊಳಲಿ ದ್ವಾರದಿಂದ ಅಡ್ಡೂರು ಸೇತುವೆರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಮಂಜೂರು ಮಾಡಲಾಗಿದೆ. ಕಿರು ನೀರಾವರಿ ಇಲಾಖೆಯಿಂದ ಮೂರು ಕೋಟಿ ರೂ. ಮತ್ತು ಎಸ್‌ಸಿಪಿಟಿ ಯೋಜನೆಯಡಿ ಎರಡು ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಕೆರೆಗಳ ಅಭಿವೃದ್ಧಿಗೆ ಯೋಜನೆ:
ಈಗಾಗಲೇ ಸರಕಾರ ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವುದರಿಂದ ಬರ ಪರಿಹಾರ ಯೋನೆಯಡಿ ಕ್ಷೇತ್ರದ ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ಚೆಕ್ ಡ್ಯಾಂ ನಿರ್ಮಿಸಲು ಬಳಸಲಾಗುವುದು ಎಂದು  ಬಾವ ತಿಳಿಸಿದರು.

ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ: 
ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿನ ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಗುರುಪುರ ಹೋಬಳಿಯ 32 ಮಸೀದಿಗಳಿಗೆ ವಿಶೇಷ ಅನುದಾನ ನೀಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯಡಿ ಜಿಲ್ಲೆಗೆ ಬಿಡುಗಡೆಯಾದ 1.20 ಕೋಟಿ ರೂ. ಮೊತ್ತದಲ್ಲಿ 1.10 ಕೋಟಿ ರೂ. ಕೇವಲ ತಾನು ಪ್ರತಿನಿಧಿಸುವ ಕ್ಷೇತ್ರಕ್ಕೆ ನೀಡಲಾಗಿದೆ. ಅಲ್ಲದೆ, ವಾಮಂಜೂರು ಚರ್ಚ್ ಸಭಾಂಗಣ ನಿರ್ಮಾಣಕ್ಕೆ ಸಿಎಂ ವಿಶೇಷ ಅನುದಾನದಿಂದ ಒಂದು ಕೋಟಿ ರೂ., ಸಂಸದ ಆಸ್ಕರ್ ಫೆರ್ನಾಂಡಿಸ್ ಅವರ ನಿಧಿಯಿಂದ 10 ಲಕ್ಷ ರೂ. ಮತ್ತು ತನ್ನ ನಿಧಿಯಿಂದ ಐದು ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಬಾವ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಥ್ವಿರಾಜ್ ಆರ್.ಕೆ., ಮುಖಂಡರಾದ ಮೆಲ್ವಿನ್ ಡಿಸೋಜ, ಪದ್ಮನಾಭ, ಬಾಷಾ, ಶಕುಂತಳಾ ಕಾಮತ್, ಅಬ್ದುಲ್ ಜಲೀಲ್, ಜಾನ್, ಸೂರಜ್ ಶ್ರೀಧರ್, ಬಿ.ಎ.ಇಲ್ಯಾಸ್, ಕೃಷ್ಣ ಅಮೀನ್, ಯೂಸೂಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News