ಫೆ.25ರಂದು ಮಾತಾ ಅಮೃತಾನಂದಮಯೀ ಪ್ರಥಮ ಬಾರಿ ಉಡುಪಿಗೆ; ಭೇಟಿಗೆ ಭರದ ಸಿದ್ಧತೆ, 60,000 ಮಂದಿ ದರ್ಶನದ ನಿರೀಕ್ಷೆ
ಉಡುಪಿ, ಫೆ.22: ಕೇರಳದ ಸದ್ಗುರು ಶ್ರೀಮಾತಾ ಅಮೃತಾನಂದಮಯೀ ದೇವಿ ಅವರು ಇದೇ ಫೆ.25ರಂದು ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಲಿದ್ದು, ಸಂಜೆ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯುವ 'ಅಮೃತ ವೈಭವ' ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಭರದ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಸಮಿತಿಯ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆ ಮಾತ್ರವಲ್ಲದೇ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಗೋವಾ ಹಾಗೂ ದೂರದ ಮುಂಬಯಿಯಿಂದಲೂ ಅಮ್ಮನ ಭಕ್ತರು ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ. ಸುಮಾರು 50ರಿಂದ 60 ಸಾವಿರ ಮಂದಿ ಆಕೆಯ ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದರು.
ಎಂಜಿಎಂ ಕಾಲೇಜಿನ ಮೈದಾನದಲ್ಲಿ ಫೆ.25ರ ಸಂಜೆ 6ಕ್ಕೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ರಾಜ್ಯಪಾಲ ವಜೂಬಾಯ್ ವಾಲಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಅಲ್ಲದೇ ರಾಜ್ಯ ಧಾರ್ಮಿಕ ದತ್ತಿ ಮತ್ತು ಜವುಳಿ ಸಚಿವ ರುದ್ರಪ್ಪ ಮಾನಪ್ಪ ಲಮಾನಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡೀಸ್ ಭಾಗವಹಿಸುವರು ಎಂದರು.
ಸಭಾ ಕಾರ್ಯಕ್ರಮದಲ್ಲಿ ಕೆಲವು ಸೇವಾ ಯೋಜನೆಗಳನ್ನು ಪ್ರಕಟಿಸಲಾ ಗುವುದು. ಇದರಲ್ಲಿ ಅಂಗನವಾಡಿ ಶಾಲೆಗಳಿಗೆ ವಾಟರ್ ಪ್ಯೂರಿಫಯರ್ ಕೊಡುಗೆ, ಅಮೃತಶ್ರೀ ಮಹಿಳಾ ಸಬಲೀಕರಣ ಯೋಜನೆ, ಸ್ವಚ್ಛತಾ ಕಾರ್ಮಿಕರಿಗೆ ಕಿಟ್ ವಿತರಣೆ ಸೇರಿದೆ. ಬಳಿಕ ಸತ್ಸಂಗ, ಭಜನೆ, ಧ್ಯಾನ ನಡೆಯಲಿದ್ದು, ಇದಾದ ನಂತರ ಅಮ್ಮನ ವೈಯಕ್ತಿಕ ದರ್ಶನವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಜಾತಿ, ಮತ, ಧರ್ಮ ಪಂಥಗಳ ಭೇದವಿಲ್ಲದೇ ಅಮ್ಮ ಎಲ್ಲರಿಗೂ ದರ್ಶನವಿತ್ತು ಅನುಗ್ರಹಿಸುವರು. ಅಮ್ಮನ ವೈಯಕ್ತಿಕ ದರ್ಶನ ಪಡೆಯಲು ಸಾರ್ವಜನಿಕರು ಟೋಕನ್ ಪಡೆಯಬೇಕು. ಚಿಕ್ಕ ಮಗುವಿನಿಂದ ಹಿಡಿದು ಎಲ್ಲರಿಗೂ ಉಚಿತವಾಗಿ ಟೋಕನ್ ನೀಡಲಾಗುತ್ತದೆ. ಟೋಕನ್ ಹೊಂದಿರುವ ಎಲ್ಲರಿಗೂ ಅಮ್ಮನ ದರ್ಶನ ಪಡೆಯಲು ಅವಕಾಶವಿದೆ ಎಂದರು.
ಊಟದ ವ್ಯವಸ್ಥೆ: ಎಂಜಿಎಂ ಕಾಲೇಜು ಮೈದಾನದಲ್ಲಿ 25ರ ಅಪರಾಹ್ನ ದಿಂದಲೇ ಅಮ್ಮನ ದರ್ಶನಕ್ಕೆ ಬರುವ ಭಕ್ತರಿಗಾಗಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಅಪರಾಹ್ನ ಸುಮಾರು 25ರಿಂದ 30 ಸಾವಿರ ಮಂದಿ ಹಾಗೂ ರಾತ್ರಿ 50ರಿಂದ 60ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ರಘುಪತಿ ಭಟ್ ಹೇಳಿದರು
ಇದರೊಂದಿಗೆ ಫೆ.26ರ ಬೆಳಗ್ಗೆ ಉಪಹಾರದ ವ್ಯವಸ್ಥೆಯೂ ಇರುತ್ತದೆ. ಮೈದಾನದಲ್ಲಿ ಸುಮಾರು 20,000 ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಕೇರಳದಿಂದ ಬಂದವರೇ ಕಾರ್ಯಕ್ರಮದ ವೇದಿಕೆಯನ್ನು ಹಾಗೂ ದರ್ಶನದ ವ್ಯವಸ್ಥೆಯನ್ನು ನೋಡಿಕೊಳ್ಳಲಿದ್ದಾರೆ ಎಂದರು.
ಮೈದಾನದಲ್ಲಿ ವೈದ್ಯಕೀಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿ, ವಿಐಪಿಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಜನಸಾಮಾನ್ಯರ ಕಾರು ಪಾರ್ಕಿಂಗ್‌ಗೆ ರಾಯಲ್ ಗಾರ್ಡನ್‌ನಲ್ಲಿ ವ್ಯವಸ್ಥೆ ಇದ್ದು, ಅಲ್ಲಿಂದ ಎಂಜಿಎಂ ಮೈದಾನಕ್ಕೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಉಳಿದಂತೆ ಟಿಟಿ, ಮಿನಿ ಬಸ್, ಘನವಾಹನಗಳಿಗೆ ಬೀಡಿನಗುಡ್ಡೆಯ ಮಹಾತ್ಮಗಾಂಧಿ ಕ್ರೀಡಾಂಗಣ ಹಾಗೂ ಪಿಲಿಚಂಡಿ ದೈವಸ್ಥಾನ ವಠಾರದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗುವುದು. ದ್ವಿಚಕ್ರ ವಾಹನಗಳಿಗೆ ಕುಂಜಿಬೆಟ್ಟು ಯುಪಿಎಂಸಿ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು.
ಉಡುಪಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಸತತ 14 ವರ್ಷಗಳ ಪ್ರಯತ್ನದ ಬಳಿಕ ಮೊದಲ ಬಾರಿ ಉಡುಪಿಗೆ ಅಮ್ಮನನ್ನು ಕರೆತರಲು ಯಶಸ್ವಿಯಾಗಿದೆ. ಈ ಕಾರ್ಯಕ್ರಮವನ್ನು ಯಶಸ್ಸುಗೊಳಿಸುವಂತೆ ಸೇವಾ ಸಮಿತಿಯ ಶ್ರೀಧರ ಕಿನ್ನಿಮೂಲ್ಕಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಪ್ರಧಾನ ಕಾರ್ಯದರ್ಶಿ ನವೀನ್‌ಕುಮಾರ್, ಶ್ರೀಧರ ಕಿನ್ನಿಮೂಲ್ಕಿ, ರಮೇಶ್ ಕಾಂಚನ್, ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಕೆಬೈಲು ಉಪಸ್ಥಿತರಿದ್ದರು.