ಉಡುಪಿ: ಪಾಳು ಬಾವಿಯಲ್ಲಿದ್ದ ಜೋಡಿ ಹೆಬ್ಬಾವಿನ ರಕ್ಷಣೆ
ಉಡುಪಿ, ಫೆ.22: ಎರಡು ತಿಂಗಳ ಹಿಂದೆ ಉಪ್ಪೂರು ಗ್ರಾಮದ ಅಮ್ಮುಂಜೆ ಎಂಬಲ್ಲಿರುವ ಪಾಳು ಬಾವಿಯೊಂದಕ್ಕೆ ಬಿದ್ದು ಆಹಾರವಿಲ್ಲದೆ ದುರ್ಬಲಗೊಂಡಿದ್ದ ಜೋಡಿ ಹೆಬ್ಬಾವುಗಳನ್ನು ಉರಗ ತಜ್ಞ ಗುರುರಾಜ್ ಸನಿಲ್ ನೇತೃತ್ವದಲ್ಲಿ ಬುಧವಾರ ರಕ್ಷಿಸಲಾಯಿತು.
ಅಮ್ಮುಂಜೆಯ ಹಾಡಿಯಲ್ಲಿ ಆವರಣ ಹಾಗೂ ನೀರಿಲ್ಲದ ಪಾಳು ಬಾವಿ ಯಲ್ಲಿ ಎರಡು ಹೆಬ್ಬಾವು ಇರುವುದನ್ನು ಸ್ಥಳೀಯರು ಎರಡು ತಿಂಗಳ ಹಿಂದೆ ನೋಡಿದ್ದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದರೂ ಅದನ್ನು ರಕ್ಷಿಸುವ ಯಾವುದೇ ಪ್ರಯತ್ನಗಳು ನಡೆದಿರಲಿಲ್ಲ.
ಇತ್ತೀಚೆಗೆ ಸ್ಥಳೀಯರು ಈ ವಿಚಾರದ ಕುರಿತು ಸಮಾಜ ಸೇವಕ ನಿತ್ಯಾ ನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ಅವರು ಇದನ್ನು ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ತಿಳಿಸಿ ಬಾವಿಯಲ್ಲಿರುವ ಹೆಬ್ಬಾವುಗಳನ್ನು ರಕ್ಷಿಸಲು ಮುಂದಾದರು. ಅದರಂತೆ ಗುರುರಾಜ್ ಸನಿಲ್, ನಿತ್ಯಾನಂದ ಒಳಕಾಡು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬುಧವಾರ ಬೆಳಗ್ಗೆ 11:30ಕ್ಕೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಗಿಳಿದರು.
ಏಣಿ ಮೂಲಕ ಬಾವಿಗೆ ಇಳಿದ ಗುರುರಾಜ್ ಸನಿಲ್ ಬಾವಿಯಲ್ಲಿದ್ದ ಹೆಣ್ಣು ಹೆಬ್ಬಾವವನ್ನು ಮೊದಲು ರಕ್ಷಿಸಿ ಮೇಲಕ್ಕೆ ತಂದರು. ನಂತರ ಗಂಡು ಹೆಬ್ಬಾವಿಗಾಗಿ ಹುಡುಕಾಟ ನಡೆಸಲಾಯಿತು. ಬಾವಿಯಲ್ಲಿನ ಬಿಲದೊಳಗೆ ಅವಿತಿದ್ದ ಗಂಡು ಹೆಬ್ಬಾವವನ್ನು ಹೊರಗೆ ತರಲು ಹರ ಸಾಹಸ ಪಡಬೇಕಾ ಯಿತು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಿಲವನ್ನು ಅಗೆದು ಹೆಬ್ಬಾವು ರಕ್ಷಿಸಲು ಸಹಕರಿಸಿದರು.
ಸತತ ಶ್ರಮದಿಂದ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಗಂಡು ಹೆಬ್ಬಾವನ್ನೂ ರಕ್ಷಿಸಿ ಮೇಲಕ್ಕೆ ತರಲಾಯಿತು. ಇವುಗಳನ್ನು ನೋಡಲು ಸ್ಥಳೀಯರು ಕುತೂಹಲದಿಂದ ಸ್ಥಳದಲ್ಲಿ ಜಮಾಯಿಸಿದ್ದರು. ಹೆಣ್ಣು 10 ಅಡಿ ಉದ್ದವಿದ್ದರೆ, ಗಂಡು ಸುಮಾರು ಎಂಟು ಅಡಿ ಉದ್ದವಿತ್ತು. ಬಳಿಕ ಈ ಎರಡು ಹೆಬ್ಬಾವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಯಿತು.
ಡಿಸೆಂಬರ್ ತಿಂಗಳು ಹೆಬ್ಬಾವುಗಳ ಮಿಲನದ ಸಮಯ. ಮಿಲನಕ್ಕಾಗಿ ಹೆಣ್ಣು ಹೆಬ್ಬಾವನ್ನು ಅರಸಿಕೊಂಡು ಬಂದ ಗಂಡು ಹೆಬ್ಬಾವು ಆಯ ತಪ್ಪಿ ಆವರಣ ಇಲ್ಲದ ಬಾವಿಗೆ ಬಿದ್ದಿದೆ. ಇದೀಗ ಎರಡು ಹೆಬ್ಬಾವನ್ನು ರಕ್ಷಿಸ ಲಾಗಿದೆ. ಇನ್ನು ಹೆಣ್ಣು ಹಾವು ಮಾರ್ಚ್ ತಿಂಗಳಲ್ಲಿ ಮೊಟ್ಟೆ ಇಡುತ್ತದೆ. ಎರಡು ತಿಂಗಳ ಕಾಲ ಸರಿಯಾದ ಆಹಾರ ಇಲ್ಲದೆ ಹೆಣ್ಣು ಹೆಬ್ಬಾವು ತೀರಾ ದುರ್ಬಲಗೊಂಡಿದೆ. ಈ ಹೆಬ್ಬಾವುಗಳನ್ನು ನೀರು ಇರುವ ಪ್ರದೇಶದಲ್ಲಿ ಬಿಟ್ಟರೆ ಅದೇ ಆಹಾರವನ್ನು ಹುಡುಕಿಕೊಳ್ಳುತ್ತದೆ
-ಗುರುರಾಜ ಸನಿಲ್, ಉರಗ ತಜ್ಞ