ರಶ್ಯದ ಸರಕು ಸಾಗಣೆ ಬಾಹ್ಯಾಕಾಶ ನೌಕೆಯ ಯಶಸ್ವಿ ಉಡ್ಡಯನ

Update: 2017-02-22 16:11 GMT

ಮಾಸ್ಕೊ, ಫೆ. 22: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಹಾರ ಪದಾರ್ಥಗಳು ಮತ್ತು ಸಲಕರಣೆಗಳನ್ನು ಒಯ್ಯುವ ಮಾನವರಹಿತ ಬಾಹ್ಯಾಕಾಶ ನೌಕೆಯೊಂದನ್ನು ರಶ್ಯ ಬುಧವಾರ ಯಶಸ್ವಿಯಾಗಿ ಉಡಾಯಿಸಿದೆ.

ಡಿಸೆಂಬರ್‌ನಲ್ಲಿ ನಡೆದ ಅದರ ಈ ಮೊದಲಿನ ಪ್ರಯತ್ನವು ವಿಫಲವಾಗಿತ್ತು. ಅಂದು ಮಾನವರಹಿತ ನೌಕೆಯು ಉಡಾವಣೆಗೊಂಡ ಸ್ವಲ್ಪವೇ ಹೊತ್ತಿನಲ್ಲಿ ಭೂಮಿಗೆ ಅಪ್ಪಳಿಸಿತ್ತು.

‘ಪ್ರೊಗ್ರೆಸ್’ ಸರಕು ನೌಕೆಯನ್ನು ಹೊತ್ತ ಸೋಯಝ್ ರಾಕೆಟ್ ನಿಗದಿಯಾದಂತೆ 5:58 (ಜಿಎಂಟಿ)ಕ್ಕೆ ಕಝಕ್‌ಸ್ತಾನದ ಬೈಕನೂರು ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಹಾರಿತು ಎಂದು ರಶ್ಯ ಬಾಹ್ಯಾಕಾಶ ಸಂಸ್ಥೆ ‘ರಾಸ್ಕಾಸ್ಮಾಸ್’ ಹೇಳಿದೆ.

ಸುಮಾರು ಒಂಬತ್ತು ನಿಮಿಷಗಳ ಬಳಿಕ ಪ್ರೊಗ್ರೆಸ್ ನೌಕೆಯು ಸೋಯಝ್ ರಾಕೆಟ್‌ನ ಮೂರನೆ ಘಟಕದಿಂದ ಸಹಜ ರೀತಿಯಲ್ಲಿ ಪ್ರತ್ಯೇಕಗೊಂಡಿತು ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪುವುದಕ್ಕಾಗಿ ಎರಡು ದಿನಗಳ ಪ್ರಯಾಣ ಆರಂಭಿಸಿತು.

ಅದು ಶುಕ್ರವಾರ 08:34 (ಜಿಎಂಟಿ)ಕ್ಕೆ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News