ಮುಖ್ಯಮಂತ್ರಿ ಕಾರ್ಯಕ್ರಮಗಳಿಗೆ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ: ಡಿವೈಎಫ್ಐ
ಮಂಗಳೂರು, ಫೆ.22: ಸಿಪಿಎಂ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಫೆ.25ರಂದು ನಡೆಯುವ ಕರಾವಳಿ ಸೌಹಾರ್ದ ರ‍್ಯಾಲಿಗೆ ಪ್ರತಿಯಾಗಿ ಈಗಾಗಲೇ ಸಂಘಪರಿವಾರದವರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆಲವೆಡೆಗಳಲ್ಲಿ ಕಿಡಿಗೇಡಿತನದ ಕೃತ್ಯವನ್ನು ಎಸಗಲಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಸೌಹಾರ್ದ ರ‍್ಯಾಲಿ ಪ್ರಚಾರಾರ್ಥವಾಗಿ ನಗರದ ಹೊರವಲಯದ ಶಕ್ತಿನಗರ, ಉರ್ವಸ್ಟೋರ್, ಕೊಂಚಾಡಿ, ಯೆಯ್ಯೋಡಿ ಮೊದಲಾದ ಕಡೆಗಳಲ್ಲಿ ಅಳವಡಿಸಲಾದ ಸುಮಾರು 25 ಬ್ಯಾನರ್‌ಗಳನ್ನು ಕೊಂಡೊಯ್ದಿದ್ದಾರೆ. ನಗರದೊಳಗಿನ 12 ಫೆಕ್ಸ್‌ಗಳು ಕಾಣೆಯಾಗಿವೆ. ಅಲ್ಲದೆ ಸಿಪಿಎಂ ಅಳವಡಿಸಲಾದ ಪೋಸ್ಟರ್‌ಗಳಿಗೆ ಹಾನಿಗೊಳಿಸಲಾಗಿದೆ ಎಂದರು.
ಸೌಹಾರ್ದ ರ‍್ಯಾಲಿಗೆ ಸಂಘಪರಿವಾರದವರು ತೊಂದರೆಗಳನ್ನು ನೀಡುತ್ತಿರುವ ಬಗ್ಗೆ ಸಿಪಿಎಂ ರಾಜ್ಯ ನಿಯೋಗವು ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಅಲ್ಲದೆ, ಈ ಸಂಬಂಧ ಸಿಪಿಎಂ ರಾಜ್ಯ ನಿಯೋಗವು ಮಂಗಳವಾರ ಪೊಲೀಸ್ ಮಹಾನಿರ್ದೇಶರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದೆ. ಸಂಘಪರಿವಾರದವರು ನೀಡುತ್ತಿರುವ ತೊಂದರೆಯ ಬಗ್ಗೆ ಅವರಿಗೆ ಮನವರಿಕೆ ಮಾಡಲಾಗಿದೆ. ರ‍್ಯಾಲಿ ಹಾಗೂ ಸಮಾವೇಶಕ್ಕೆ ರಕ್ಷಣೆ ನೀಡಬೇಕಾದುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ರ‍್ಯಾಲಿ ಹಾಗೂ ಸಮಾವೇಶಕ್ಕೆ ಪಕ್ಷ, ಜಾತಿ, ಧರ್ಮ ಮರೆತು ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ಸಂಘಪರಿವಾರದವರು ಬಂದ್ ಕರೆ ನೀಡಿರುವುದು ಸರಿಯಲ್ಲ. ಅದನ್ನು ತಕ್ಷಣ ವಾಪಾಸು ಪಡೆಯಬೇಕೆಂದು ಕೇಳಿಕೊಳ್ಳುತ್ತಿದ್ದೇವೆ. ಮತ್ತು ಜಿಲ್ಲಾಡಳಿತ ಬಂದ್‌ಗೆ ಅವಕಾಶ ನೀಡಬಾರದು. ಒಂದು ವೇಳೆ ಬಂದ್ ಆಗಿದ್ದರೂ ಕಾಲ್ನಡಿಯಲ್ಲಾದರೂ ನೆಹರೂ ಮೈದಾನಕ್ಕೆ ಬಂದು ಸೇರುತ್ತೇವೆ ಎಂದರು.
ಅನ್ಯ ರಾಜ್ಯದ ಮುಖ್ಯಮಂತ್ರಿಯೊಬ್ಬರು ಜಿಲ್ಲೆಗೆ ಭೇಟಿ ನೀಡುವಾಗ ಅವರನ್ನು ತಡೆಯಲು ಪ್ರಯತ್ನಿಸುತ್ತಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು. ಮುಖ್ಯಮಂತ್ರಿಯೊಬ್ಬರ ಭೇಟಿಯನ್ನು ತಡೆಯಲು ಮುಂದಾಗುವುದು ಸಂವಿಧಾನದಮ ಮೇಲೆ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ. ಸಂವಿಧಾನದ ಮೇಲೆ ನಂಬಿಕೆ ಇಲ್ಲದವರ ಕೃತ್ಯವಾಗಿದೆ. ಆದ್ದರಿಂದ ಅನ್ಯ ರಾಜ್ಯದ ಮುಖ್ಯಮಂತ್ರಿಯೊಬ್ಬರು ಮಂಗಳೂರಿಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ಸೂಕ್ತ ರಕ್ಷಣೆ ಒದಗಿಸುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ ಎಂದು ಮುನೀರ್ ತಿಳಿಸಿದರು.