ಫೆ.26ರಂದು ಪೌರ ಸನ್ಮಾನ ಕಾರ್ಯಕ್ರಮ
ಮಂಗಳೂರು, ಫೆ..22: ಕೊಲ್ಯ ಸೋಮೇಶ್ವರ ಸೀತಾರಾಮ ಬಂಗೇರ ಸನ್ಮಾನ ಸಮಿತಿ ವತಿಯಿಂದ ಶ್ರೀ ಶಾರದಾ ಮಹೋತ್ಸವ ಸಮಿತಿಯ ಸಹಯೋಗದೊಂದಿಗೆ ಹಿರಿಯ ಧಾರ್ಮಿಕ-ಸಾಮಾಜಿಕ-ರಾಜಕೀಯ ಮುತ್ಸದ್ಧಿ ಸೀತಾರಾಮ ಬಂಗೇರ ಕೊಲ್ಯ ಅವರ 75ರ ಸಂಭ್ರಮದ ಅಂಗವಾಗಿ ಪೌರ ಸನ್ಮಾನ ಕಾರ್ಯಕ್ರಮ ಫೆ. 26ರಂದು ಕೊಲ್ಯ ಶ್ರೀ ಶಾರದಾ ಸಭಾಸದನದ ವಠಾರದಲ್ಲಿ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಕೆ.ಜಯರಾಮ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 4-5 ದಶಕಗಳಿಂದ ಉಳ್ಳಾಲ ಪರಿಸರದಲ್ಲಿ ಸಾಮಾಜಿಕವಾಗಿ ನಿಸ್ವಾರ್ಥ ಸೇವೆ ಮಾಡಿರುವ ಸೀತಾರಾಮ ಬಂಗೇರ ಅವರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮದಲ್ಲಿ ಬೆಳಗ್ಗೆ 9:30ಕ್ಕೆ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ, ನೇತ್ರದಾನ ನೊಂದಾವಣೆ, 10:30ಕ್ಕೆ ಬಂಗೇರರ ಬದುಕು-ವಿಚಾರಗೋಷ್ಠಿ ವಿಚಾರ ಮಂಡನೆ, ಮಧ್ಯಾಹ್ನ 2:30ಕ್ಕೆ ಭೀಷ್ಮನ ಗೆಲ್ಮೆ ಯಕ್ಷಗಾನ ತಾಳಮದ್ದಳೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ಕ್ಕೆ ನಿತ್ಯೆ ಬನ್ನಗ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಸಂಸದ ನಳಿನ್‌ಕುಮಾರ್ ಕಟೀಲು, ಸಚಿವ ಯು.ಟಿ. ಖಾದರ್, ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಪಿ.ಎಸ್.ಪ್ರಕಾಶ್ ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ್‌ದಾಸ್ ಶೆಟ್ಟಿ, ಸಂಚಾಲಕ ತೋನ್ಸೆ ಪುಷ್ಕಳ್‌ಕುಮಾರ್, ಕಾರ್ಯದರ್ಶಿ ಪ್ರಕಾಶ್ ಎಚ್.ಕೊಲ್ಯ ತಿಳಿಸಿದರು.