ಸುಷ್ಮಾ 'ಟ್ವಿಟ್ಟರ್ ಕಾರ್ಯಾಚರಣೆ'ಯನ್ನು ತಡೆದ ನೌಕಾಪಡೆಯ ಅಧಿಕಾರಿ

Update: 2017-02-23 03:44 GMT

ಹೈದರಾಬಾದ್, ಫೆ.23: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಟ್ವಿಟ್ಟರ್ ಕಾರ್ಯಾಚರಣೆಯನ್ನು ನೌಕಾಪಡೆ ಅಧಿಕಾರಿಗಳು ತಡೆದು, ನೌಕಾಪಡೆಯ ನಿಯಮಾವಳಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಸಚಿವೆಗೆ ವಿವರಿಸಿದ ವಿಚಿತ್ರ ಘಟನೆ ನಡೆಯಿತು.

ಯೆಮನ್‌ನ ಅಡೇನ್‌ನಲ್ಲಿ ಹಡಗಿನಲ್ಲಿದ್ದ ಭಾರತೀಯರನ್ನು ರಕ್ಷಿಸುವುದು ಸುಷ್ಮಾ ಅವರ ಉದ್ದೇಶವಾಗಿತ್ತು. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅವರನ್ನು ರಕ್ಷಿಸುವಂತೆ ನೌಕಾಪಡೆಗೆ ಸೂಚಿಸಿದರು. ಆದರೆ ನೌಕಾಪಡೆ ವಕ್ತಾರರು ನಿಯಮಾವಳಿ ಪುಸ್ತಕವನ್ನು ಸಚಿವೆಗೆ ಸಾರ್ವಜನಿಕವಾಗಿ ಓದಿಹೇಳಿ ಸಚಿವೆಯ ಆಸೆಗೆ ತಣ್ಣೀರೆರಚಿದರು. ನೌಕಾಪಡೆ ಕಾರ್ಯಾಚರಣೆ ಕೈಗೊಳ್ಳುವ ಮುನ್ನ ಕೆಲ ಆಡಳಿತಾತ್ಮಕ ವಿಧಿವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ವಕ್ತಾರರು ನಯವಾಗಿಯೇ ಸಚಿವೆಗೆ ಮನವರಿಕೆ ಮಾಡಿಕೊಟ್ಟರು.

"ಮೇಡಂ, ವಿದೇಶಾಂಗ ಸಚಿವಾಲಯದಿಂದ ರಕ್ಷಣಾ ಸಚಿವಾಲಯಕ್ಕೆ, ಅಲ್ಲಿಂದ ಭಾರತೀಯ ನೌಕಾಪಡೆಗೆ ಸ್ಪಷ್ಟ ಸೂಚನೆ ಬರಬೇಕು'' ಎಂದು ಸಚಿವೆಗೆ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಲಾಯಿತು.

ಜಗ್ ಪ್ರಭಾ ಹೆಸರಿನ ಭಾರತೀಯ ಹಡಗಿನ ಮುಖ್ಯ ಅಧಿಕಾರಿ ಸುಬ್ರತ್ ಶುಕ್ಲಾ ಅವರು ಸಚಿವೆಗೆ ಟ್ವೀಟ್ ಮಾಡಿ, ಅಪಾಯಕಾರಿ ಪರಿಸ್ಥಿತಿ ಬಗ್ಗೆ ವಿವರಿಸಿದ್ದರು. ಭಾರತಕ್ಕೆ ವಾಪಸ್ ಬರಲು ಅನುಕೂಲ ಕಲ್ಪಿಸಿಕೊಡುವಂತೆ ಸಚಿವೆಗೆ ಮನವಿ ಮಾಡಿದ್ದರು. ಅವರ ಪತ್ನಿ ಕೂಡಾ ಹಡಗಿನಲ್ಲಿದ್ದು, ಅಡೇನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಈ ಹಡಗು ಖಾಸಗಿ ಕಂಪೆನಿಗೆ ಸೇರಿದ್ದಾಗಿದ್ದು, ಫೆಬ್ರವರಿ 14ರಿಂದೀಚೆಗೆ ಶುಕ್ಲಾ ಸಂಕಷ್ಟದಲ್ಲಿರುವ ಬಗ್ಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News