ಉಳ್ಳಾಲ ವಲಯ ಸಿಪಿಎಂ ಕಚೇರಿಗೆ ದುಷ್ಕರ್ಮಿಗಳಿಂದ ಬೆಂಕಿ

Update: 2017-02-23 11:25 GMT

ಉಳ್ಳಾಲ, ಫೆ.23: ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿರುವ ಸಿಪಿಐಎಂ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆಯು ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಕಚೇರಿಯಲ್ಲಿ ಸಂಗ್ರಹಿಸಿಡಲಾಗಿದ್ದ ಸಂಘಟನೆಗೆ ಸೇರಿದ ಅಮೂಲ್ಯ ಕಡತಗಳು, ದಾಖಲೆಗಳು ಬೆಂಕಿಗಾಹುತಿಯಾಗಿದೆ.

ಫೆ.25ರಂದು ಮಂಗಳೂರಿನಲ್ಲಿ ನಡೆಯಲಿರುವ ಸೌಹಾರ್ದ ರ‍್ಯಾಲಿಯಲ್ಲಿ ಕೇರಳ ಸೀಎಂ ಪಿಣರಾಯಿ ವಿಜಯನ್ ಭಾಗವಹಿಸುವ ವಿರುದ್ಧ ನಡೆದಿರುವ ಕೃತ್ಯ ಎಂದು ಶಂಕೆ ವ್ಯಕ್ತವಾಗಿದೆ.

 ತೊಕ್ಕೊಟ್ಟು ಒಳಪೇಟೆಯಲ್ಲಿರುವ ಹುಸೇನ್ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಸಿಪಿಐಎಂ ಕಚೇರಿಯು ಕಳೆದ ಹಲವಾರು ವರ್ಷದಿಂದ ಕಾರ್ಯಾಚರಿಸುತ್ತಿತ್ತು. ಬುಧವಾರ ರಾತ್ರಿ ಮಹಡಿ ಮೇಲಿಂದ ಬಂದ ಕಿಡಿಗೇಡಿಗಳು ಕಚೇರಿ ಬಾಗಿಲನ್ನು ಮುರಿದು ಒಳನುಗ್ಗಿ ಬೆಂಕಿ ಹಾಕಿ ಪರಾರಿಯಾಗಿದ್ದಾರೆ.

 ಬೆಂಕಿ ಹಾಕಿದ ಪರಿಣಾಮ ಕಚೇರಿಯ ಒಳಗಿದ್ದ ಟಿವಿ, ಕಪಾಟು, ಬ್ಯಾನರ್, ಹೋಲ್ಡಿಂಗ್‌ಗಳು ಸುಟ್ಟು ಕರಕಲಾಗಿವೆ. ಕಪಾಟಿಗೆ ಬೆಂಕಿ ಹಚ್ಚಿದ ಪರಿಣಾಮ ಡಿವೈಎಫ್‌ಐ ಸಂಘಟನೆಯು ಸಂಗ್ರಹಿಸಿಟ್ಟಿದ್ದ ನಿವೇಶನ ರಹಿತರ, ಪಿಂಚಣಿಗೆ ಸಂಬಂಧಿಸಿದ ಅಮೂಲ್ಯ ದಾಖಲೆ ಕಡತಗಳು, ವಿವಿಧ ಪುಸ್ತಕಗಳು ಸುಟ್ಟು ಹೋಗಿವೆ.

ಗುರುವಾರ ಬೆಳಿಗ್ಗೆ ಕೆಳಗಿನ ಮಹಡಿಯ ಜವಳಿ ಅಂಗಡಿಯ ಸಿಬ್ಬಂದಿ ಬರುವಾಗ ಬೆಂಕಿ ಹಚ್ಚಿದ ಘಟನೆಯು ಬೆಳಕಿಗೆ ಬಂದಿದ್ದು ಕೂಡಲೇ ಉಳ್ಳಾಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಭೇಟಿ ನೀಡಿದ ಎಸಿಪಿ ಶೃತಿ, ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಹಾಗೂ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಸಿಪಿಐಎಂ ಮುಖಂಡರಾದ ಕೃಷ್ಣಪ್ಪ ಸಾಲಿಯಾನ್, ಪದ್ಮಾವತಿ ಶೆಟ್ಟಿ, ಜಯಂತ್ ನಾಯ್ಕಿ, ರೋಹಿತ್ ಭಟ್ನಗರ್ ಸೇರಿದಂತೆ ಹಲವಾರು ನಾಯಕರು ಸ್ಥಳಕ್ಕೆ ಭೇಟಿ ನೀಡಿದ್ದು ಕಿಡಿಗೇಡಿಗಳ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಪಿಣರಾಯಿ ಭೇಟಿ ವಿರೋಧಿಸಿ ಕೃತ್ಯ ಶಂಕೆ:
ಫೆ25ರಂದು ಮಂಗಳೂರಿನಲ್ಲಿ ಸಿಪಿಐಂ ನೇತೃತ್ವದಲ್ಲಿ ನಡೆಯುವ ಸೌಹಾರ್ದ ರ‍್ಯಾಲಿಗೆ ಆಗಮಿಸುತ್ತಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸಂಘ ಪರಿವಾರ ಮತ್ತು ಬಿಜೆಪಿಯು ವಿರೋಧ ವ್ಯಕ್ತಪಡಿಸಿ 25ರಂದು ಜಿಲ್ಲಾ ಬಂದ್ ಕರೆ ನೀಡಿದೆ. ಇದರ ಬೆನ್ನಲ್ಲಿಯೇ ಬುಧವಾರ ರಾತ್ರಿ ಕಿಡಿಗೇಡಿಗಳು ತೊಕ್ಕೊಟ್ಟು ಒಳಪೇಟೆಯ ಸಿಪಿಐಎಂ ಕಚೇರಿಯ ಬಾಗಿಲು ಮುರಿದು ಒಳನುಗ್ಗಿ ಹಚ್ಚಿರುವುದು ಪಿಣರಾಯಿ ಅವರು ಮಂಗಳೂರಿಗೆ ಭೇಟಿ ನೀಡುವದನ್ನು ವಿರೋಧಿಸಿ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News