ಉಚಿತ ಸೇವೆ ಮುಗಿಯುವಾಗ ಜಿಯೋ ಬಿಡುವವರು ಎಷ್ಟು ಮಂದಿ ಗೊತ್ತೇ ?
ಮುಂಬೈ, ಫೆ.23: ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ತನ್ನ ಪ್ರಮೋಶನಲ್ ಉಚಿತ ಡಾಟಾ ಸೇವೆಯನ್ನು ಮುಂದಿನ ತಿಂಗಳು ಅಂತ್ಯಗೊಳಿಸುವಾಗ ಅದರ ಪ್ರಸಕ್ತ ಗ್ರಾಹಕರಲ್ಲಿ ಶೇ.50ರಿಂದ 60ರಷ್ಟು ಮಂದಿ ಜಿಯೋ ತ್ಯಜಿಸಲಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಜಿಯೋ ಡಾಟಾ ಸೇವೆಗಳಿಗೆ ಎಪ್ರಿಲ್ 1ರಿಂದ ಬಳಕೆದಾರರು ಹಣ ಪಾವತಿಸಬೇಕಿದೆ ಹಾಗೂ ಈ ಮೊತ್ತ ಜಿಯೋ ಎದುರಾಳಿ ಕಂಪೆನಿಗಳು ವಿಧಿಸುವ ಮೊತ್ತಕ್ಕಿಂತಲೂ ಅಧಿಕವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಆದರೂ ಜಿಯೋದ ಪ್ರಮೋಶನಲ್ ಆಫರ್ ನಿಂದಾಗಿ ಟೆಲಿಕಾಂ ರಂಗದಲ್ಲಿನ ಇತರ ಸೇವಾ ಪೂರೈಕೆದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದು ನಿಜವಾದರೂ ಜಿಯೋದ ಉಚಿತ ಸೇವೆ ಮುಗಿದ ನಂತರವೂ ಟೆಲಿಕಾಂ ರಂಗ ಮಾಮೂಲಿ ಸ್ಥಿತಿಗೆ ಮರಳಲು ಇನ್ನೂ ಒಂದೆರಡು ವರ್ಷಗಳೇ ಬೇಕಾದೀತು ಎನ್ನುತ್ತಾರೆ ತಜ್ಞರು. ರಿಲಯನ್ಸ್ ಜಿಯೋ ಆರಂಭಗೊಂಡಂದಿನಿಂದ ಭಾರತಿ ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಸೆಲ್ಯೂಲರ್ ಕಂಪೆನಿಗಳು ಬಹಳಷ್ಟು ಕಷ್ಟ ಅನುಭವಿಸಬೇಕಾಗಿ ಬಂದಿತ್ತು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಈ ಕಂಪೆನಿಗಳು ವಸ್ತುಶಃ ಹೆಣಗಾಡಿದ್ದವು.
ಬೆಂಗಳೂರು ಮೂಲದ ಟೆಲಿಕಾಂ ರಂಗದ ವಿಶ್ಲೇಷಕ ಜಿ.ಕೃಷ್ಣ ಕುಮಾರ್ ಹೇಳುವಂತೆ, ಜಿಯೋದ ಪೇಯ್ಡ್ ಸರ್ವಿಸಸ್ ಆರಂಭಗೊಳ್ಳುತ್ತಿದ್ದಂತೆ ಅದರ ಈಗಿನ ಗ್ರಾಹಕರಲ್ಲಿ ಅರ್ಧಕ್ಕಿಂಲೂ ಹೆಚ್ಚು ಮಂದಿ ಈ ಸೇವೆಯನ್ನು ಕೈಬಿಡುವ ಸಾಧ್ಯತೆಯಿದೆ.