ಏರ್‌ಟೆಲ್ ನಿಂದ ಆಯ್ದ ಗ್ರಾಹಕರಿಗೆ ಅಚ್ಚರಿಯ ಕೊಡುಗೆ !
ಮುಂಬೈ,ಫೆ.23 : ಭಾರತದ ಪ್ರಮುಖ ಟೆಲಿಕಾಂ ಕಂಪೆನಿಯಾಗಿರುವ ಏರ್‌ಟೆಲ್ ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ 10ಜಿಬಿ ತನಕದ 3ಜಿ ಅಥವಾ 4ಜಿ ಡಾಟಾ ಕೇವಲ ನೂರು ರೂಪಾಯಿಗಳಿಗೆ ಒದಗಿಸುವುದಾಗಿ ಹೇಳಿದೆಯೆಂದು ವರದಿಗಳು ತಿಳಿಸಿವೆ. ಮಂಗಳವಾರ ರಿಲಯನ್ಸ್ ಜಿಯೋ ತನ್ನ ಚಂದಾದಾರ ಯೋಜನೆಯನ್ನು ಘೋಷಿಸಿದ ಪರಿಣಾಮವೇ ಇದು ಎಂದು ಹೇಳಲಾಗುತ್ತಿದೆ.
ತರುವಾಯ ಈ ಬಗ್ಗೆ ಪ್ರತಿಕ್ರಿಯಿಸಿದ ಏರ್‌ಟೆಲ್ ತನ್ನ 10ಜಿಬಿ ಡಾಟಾ ಕೊಡುಗೆ ಕೇವಲ ಕೆಲ ಆಯ್ದ ಗ್ರಾಹಕರಿಗೆ ಕೆಲವು ವಾರಗಳ ಕಾಲ ಲಭ್ಯವಿರುತ್ತದೆ ಹಾಗೂ ಅದು ಹೊಸ ಕೊಡುಗೆ ಅಲ್ಲ ಎಂದು ಹೇಳಿದೆ.
ಏರ್‌ಟೆಲ್ ಯೋಜನೆಯನ್ವಯ ಗ್ರಾಹಕರು ಈ ಕೊಡುಗೆ ಪಡೆಯಬೇಕಿದ್ದರೆ 4ಜಿ ಫೋನ್ ಹೊಂದಿರಬೇಕು. 4ಜಿ ಸೌಲಭ್ಯ ಲಭ್ಯವಿಲ್ಲದ ಪ್ರದೇಶಗಳಲ್ಲಿ ಈ ಆಫರ್ 3ಜಿ ಗ್ರಾಹಕರಿಗೆ ಲಭ್ಯವೆಂದು ಹೇಳಲಾಗುತ್ತಿದೆ. ಏರ್‌ಟೆಲ್ ನ ಈ ಹೊಸ ಅಚ್ಚರಿಯ ಕೊಡುಗೆ ‘ಮೈಏರ್‌ಟೆಲ್ ಆ್ಯಪ್’ ಮೂಲಕ ಪಡೆಯಬಹುದಾಗಿದೆ ಎನ್ನಲಾಗಿದೆ. ಈ 10 ಜಿಬಿ ಡಾಟಾ ಕೊಡುಗೆ ಕೇವಲ 28 ದಿನಗಳಿಗೆ ಮಾತ್ರ ಲಭ್ಯವೆಂದು ಹೇಳಲಾಗುತ್ತದೆ. ಮೇಲಾಗಿ ಈ ಕೊಡುಗೆ ಕೆಲವು ಆಯ್ದ ಗ್ರಾಹಕರಿಗ ಮಾತ್ರ ಕಂಪೆನಿ ನೀಡುವುದು ಎಂದು ಹೇಳಲಾಗುತ್ತಿರುವುದರಿಂದ ಅಚ್ಚರಿಯ ಕೊಡುಗೆ ಬಗ್ಗೆ ಏರ್‌ಟೆಲ್ ಸ್ಪಷ್ಟೀಕರಣವೊದಗಿಸಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದೆ.