ಬಿಎಂಸಿ ಚುನಾವಣೆ: ಬಿಜೆಪಿ ವಿರುದ್ಧ ಶಿವಸೇನೆ ಮುನ್ನಡೆ
ಮುಂಬೈ, ಫೆ.23: ದೇಶದ ಶ್ರೀಮಂತ ಮಹಾನಗರ ಪಾಲಿಕೆ ಮುಂಬೈನ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ) ಚುನಾವಣೆಯ ಮತ ಎಣಿಕೆ ಗುರುವಾರ ಬೆಳಗ್ಗೆ ಆರಂಭವಾಗಿದ್ದು, ಆಡಳಿತರೂಢ ಶಿವಸೇನೆ ಪ್ರತಿ ಸ್ಪರ್ಧಿ ಬಿಜೆಪಿಗಿಂತ ಭಾರೀ ಮುನ್ನಡೆಯಲ್ಲಿದ್ದು, ಪಕ್ಷದ ಕಾರ್ಯಕರ್ತರು ದಾದರ್‌ನಲ್ಲಿರುವ ಶಿವಸೇನಾ ಭವನದ ಎದುರು ಜಮಾಯಿಸಿ ಸಂಭ್ರಮಾಚರಣೆ ಆಚರಿಸತೊಡಗಿದ್ದಾರೆ.
ಬಿಎಂಸಿ ಹಾಗೂ ಮಹಾರಾಷ್ಟ್ರದ ಇತರ 9 ಮುನ್ಸಿಪಲ್ ಕಾಪೋರೇಶನ್‌ಗಳ ಚುನಾವಣಾ ಫಲಿತಾಂಶ ಗುರುವಾರ ಪ್ರಕಟಗೊಳ್ಳಲಿದೆ. ಒಟ್ಟು 227 ವಾರ್ಡ್‌ಗಳ ಪೈಕಿ ಶಿವಸೇನೆ 85ರಲ್ಲಿ ಮುನ್ನಡೆಯಲ್ಲಿದ್ದು, 5 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದೆ. ಶಿವಸೇನೆಗೆ ತೀವ್ರ ಸ್ಪರ್ಧೆಯೊಡ್ಡುತ್ತಿರುವ ಬಿಜೆಪಿ 52 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, 2 ಸ್ಥಾನವನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 19 ವಾರ್ಡ್‌ಗಳಲ್ಲಿ ಮುನ್ನಡೆಯಲ್ಲಿದ್ದು, 1 ವಾರ್ಡ್‌ನಲ್ಲಿ ಜಯ ಸಾಧಿಸಿದೆ.
ಶಿವಸೇನೆ ಪಕ್ಷ ಕಳೆದ 20 ವರ್ಷಗಳಿಂದ ಬಿಎಂಸಿಯಲ್ಲಿ ಅಧಿಕಾರದಲ್ಲಿದೆ. 1992 ರಿಂದ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದ ಶಿವಸೇನೆ ಈ ಬಾರಿ ಏಕಾಂಗಿಯಾಗಿ ಸ್ಪರ್ಧಿಸಿದೆ. ಈ ಬಾರಿಯ ಬಿಎಂಸಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿರುವ ಉದ್ಧವ್ ಠಾಕ್ರೆ ನೇತೃತ್ವವ ಶಿವಸೇನೆ ಹಾಗೂ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮುಂದಾಳತ್ವದ ಬಿಜೆಪಿಯ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಮಂಗಳವಾರ ನಡೆದ ಬಿಎಂಸಿ ಚುನಾವಣೆಯಲ್ಲಿ 55 ಶೇ.ರಷ್ಟು ಮತದಾನ ನಡೆದಿದ್ದು, 25 ವರ್ಷಗಳ ಬಳಿಕ ಗರಿಷ್ಠ ಪ್ರಮಾಣದ ಮತದಾನವಾಗಿದೆ. ಬಿಎಂಸಿಯ ವಾರ್ಷಿಕ ಬಜೆಟ್ 37,000 ಕೋಟಿ. ರೂ. ಆಗಿದ್ದು, ಇದು ಕೆಲವು ರಾಜ್ಯಗಳ ಬಜೆಟ್‌ಗಿಂತಲೂ ಹೆಚ್ಚಿನದ್ದಾಗಿದೆ. ಬಿಎಂಸಿಯಲ್ಲಿ ಒಟ್ಟು 227 ಸೀಟುಗಳಿದ್ದು, ಬಹುಮತಕ್ಕೆ 114 ಸೀಟುಗಳ ಅಗತ್ಯವಿದೆ.