ಕೇರಳ ಮುಖ್ಯಮಂತ್ರಿಗೆ ಸೂಕ್ತ ಭದ್ರತೆ: ಸಚಿವ ಖಾದರ್
ಮಂಗಳೂರು, ಫೆ.23: ದ.ಕ. ಜಿಲ್ಲಾ ಸಿಪಿಎಂ ಪಕ್ಷವು ಫೆ.25ರಂದು ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿರುವ ಸೌಹಾರ್ದ ರ್ಯಾಲಿಯಲ್ಲಿ ಪಾಲ್ಗೊಳ್ಳಲಿರುವ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್‌ಗೆ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.
ಗುರುವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ನಡೆಯುತ್ತಿರುವ ಘಟನೆಗಳನ್ನು ಮುಂದಿಟ್ಟುಕೊಂಡು ಇಲ್ಲಿನ ಸಂಘ ಪರಿವಾರದ ಮುಖಂಡರು ಫೆ.25ರಂದು ಹರತಾಳಕ್ಕೆ ಕರೆಕೊಡುವ ಅವಶ್ಯಕತೆಯಿಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸುಭದ್ರವಾಗಿದ್ದು, ಕೇರಳ ಮುಖ್ಯಮಂತ್ರಿಗೆ ಸೂಕ್ತ ರಕ್ಷಣೆ ನೀಡಲಾಗುವುದು ಎಂದರು.
ತೊಕ್ಕೊಟ್ಟಿನಲ್ಲಿರುವ ಸಿಪಿಎಂ ಪಕ್ಷದ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದು ಖಂಡನೀಯ. ಕೃತ್ಯದಲ್ಲಿ ಪಾಲ್ಗೊಂಡ ದುಷ್ಕರ್ಮಿಗಳ ಬಂಧನಕ್ಕೆ ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಖಾದರ್ ತಿಳಿಸಿದರು.