ಸಿಪಿಎಂ ಕಚೇರಿಗೆ ಬೆಂಕಿ ಪ್ರಕರಣ: ತೊಕ್ಕೊಟ್ಟಿನಲ್ಲಿ ಸಿಪಿಎಂ ಪ್ರತಿಭಟನೆ
ಉಳ್ಳಾಲ, ಫೆ.23: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿಗೆ ಪರ-ವಿರೋಧ ಚರ್ಚೆಗಳು ವ್ಯಾಪಕಗೊಳ್ಳುತ್ತಿರುವಂತೆಯೇ ಬುಧವಾರ ರಾತ್ರಿ ತೊಕ್ಕೊಟ್ಟು ಒಳಪೇಟೆಯಲ್ಲಿರುವ ಸಿಪಿಎಂ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ. ಇದರಿಂದ ಪಕ್ಷಕ್ಕೆ ಸಂಬಂಧಪಟ್ಟ ಅಮೂಲ್ಯ ದಾಖಲೆ ಪತ್ರಗಳು ಸುಟ್ಟು ಭಸ್ಮವಾಗಿದೆ.
ಫೆ.25ರಂದು ಮಂಗಳೂರಿನಲ್ಲಿ ಸಿಪಿಎಂ ಹಮ್ಮಿಕೊಂಡಿರುವ ಕರಾವಳಿ ಸೌಹಾರ್ದ ರ‍್ಯಾಲಿಗೆ ಕೇರಳ ಮುಖ್ಯಮಂತ್ರಿ ಆಗಮನ ಖಂಡಿಸಿ ಸಂಘ ಪರಿವಾರ ಮತ್ತು ಬಿಜೆಪಿ ವಿರೋಧ ವ್ಯಕ್ತಪಡಿಸಿ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದರೆ, ಕಾರ್ಯಕ್ರಮದ ಯಶಸ್ವಿಗೆ ಸಿಪಿಎಂ ತಯಾರಿ ನಡೆಸುತ್ತಿದೆ. ಈ ಮಧ್ಯೆ ಕಿಡಿಗೇಡಿಗಳು ತೊಕ್ಕೊಟ್ಟಿನಲ್ಲಿರುವ ಉಳ್ಳಾಲ ವಲಯ ಸಿಪಿಎಂ ಕಚೇರಿಯ ಬಾಗಿಲು ಮುರಿದು ಒಳನುಗ್ಗಿ ಬೆಂಕಿ ಹಾಕಿರುವುದು ಚರ್ಚೆಗೆ ಕಾರಣವಾಗಿದೆ.
ಈ ಕೃತ್ಯದಿಂದ ಕಚೇರಿಯೊಳಗಿದ್ದ ಟಿ.ವಿ, ಕಪಾಟು, ಬ್ಯಾನರ್, ಹೋಲ್ಡಿಂಗ್‌ಗಳು ಸುಟ್ಟು ಕರಕಲಾಗಿವೆ. ಡಿವೈಎಫ್‌ಐ ಸಂಘಟನೆಯ ಅಮೂಲ್ಯ ಕಡತಗಳು ಇದೇ ಕಚೇರಿಯಲ್ಲಿಡಲಾಗಿದೆ. ಅದರಲ್ಲೂ ನಿವೇಶನ ರಹಿತರು, ಪಿಂಚಣಿಗೆ ಸಂಬಂಧಿಸಿದ ಅಮೂಲ್ಯ ಕಡತಗಳು ಸುಟ್ಟು ಹೋಗಿವೆ.
ಗುರುವಾರ ಮುಂಜಾನೆ ಪತ್ರಿಕೆ ವಿತರಕರು ಆಗಮಿಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಉಳ್ಳಾಲ ಠಾಣೆಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಡಿಸಿಪಿ ಶಾಂತರಾಜು, ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಶೃತಿ, ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು.
ಸಚಿವ ಯು.ಟಿ. ಖಾದರ್, ಉಳ್ಳಾಲ ನಗರ ಸಭಾಧ್ಯಕ್ಷ ಹುಸೈನ್ ಕುಂಞಿಮೋನು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಭೇಟಿ ನೀಡಿದ್ದು, ಘಟನೆಯನ್ನು ಖಂಡಿಸಿದ್ದಾರೆ.
ಫ್ಲೆಕ್ಸ್‌ಗಳಿಗೆ ಹಾನಿ, ಸಿಪಿಎಂ ಜಾಥಾ-ಧರಣಿ:
ಬುಧವಾರ ರಾತ್ರಿ ಕುತ್ತಾರ್, ಪಂಡಿತ್‌ಹೌಸ್‌ನ ರಸ್ತೆಬದಿ ಹಾಕಲಾಗಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಸ್ವಾಗತ ಕೋರಿ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನೂ ಹಾನಿಮಾಡಲಾಗಿದೆ. ಘಟನೆಗಳನ್ನು ಖಂಡಿಸಿ ಸಿಪಿಎಂ ಮುಖಂಡರು ಹಾಗೂ ಕಾರ್ಯಕರ್ತರು ಕಚೇರಿಯಿಂದ ತೊಕ್ಕೊಟ್ಟು ಜಂಕ್ಷನ್‌ವರೆಗೆ ಗುರುವಾರ ಪ್ರತಿಭಟನಾ ಜಾಥಾ ನಡೆಸಿದರು. ಬಳಿಕ ತೊಕ್ಕೊಟ್ಟು ಬಸ್ ತಂಗುದಾಣದಲ್ಲಿ ಧರಣಿ ನಡೆಸಿದರು.
ಸಿಪಿಎಂ ಉಳ್ಳಾಲ ವಲಯ ಅಧ್ಯಕ್ಷ ಕೃಷ್ಣಪ್ಪಸಾಲಿಯಾನ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಂದ ಅನೇಕ ಅಮಾಯಕ ಯುವಕರು ಪ್ರಾಣ ಕಳಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಬಲಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಸೌಹಾರ್ದ ರ್ಯಾಲಿ ಸಹಿಸದ ಕೋಮುವಾದಿ ಶಕ್ತಿಗಳು ಸಾಮರಸ್ಯದ ಗೂಡಾಗಿರುವ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿದೆ ಎಂದು ಆರೋಪಿಸಿದರು.
ಕೇರಳ ಮುಖ್ಯಮಂತ್ರಿಯು ಮಂಗಳೂರಿನಲ್ಲಿ ನಡೆಯುವ ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸುವುದನ್ನು ತಡೆಯಲು ಯಾರಿಂದಲೂ ಅಸಾಧ್ಯ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.
ಪಕ್ಷದ ಮುಖಂಡರಾದ ಕೆ.ಆರ್.ಶ್ರೀಯಾನ್, ಪದ್ಮಾವತಿ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಜೀವನ್ ಕುತ್ತಾರು, ಬಾಬು ಪಿಲಾರ್, ರಫೀಕ್ ಹರೇಕಳ, ಇಬ್ರಾಹೀಂ ಅಂಬ್ಲಮೊಗರು, ಜಯಂತ್ ನಾಯ್ಕಾ, ಅರುಣ್ ತೊಕ್ಕೊಟ್ಟು ಪಾಲ್ಗೊಂಡಿದ್ದರು.
ಪಿಎಫ್‌ಐ ಖಂಡನೆ:
ಮಂಗಳೂರಿನಲ್ಲಿ ನಡೆಯುವ ಕರಾವಳಿ ಸೌಹಾರ್ದ ರ್ಯಾಲಿಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವುದಕ್ಕೆ ಸಂಘ ಪರಿವಾರದ ವಿರೋಧ ಮತ್ತು ತೊಕ್ಕೊಟ್ಟಿನಲ್ಲಿರುವ ಉಳ್ಳಾಲ ವಲಯ ಸಿಪಿಎಂ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಕೃತ್ಯವನ್ನು ಪಿಎಫ್‌ಐ ದ.ಕ. ಘಟಕ ಖಂಡಿಸಿದೆ.
ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ, ಸಂಚಾರ, ಧರ್ಮ, ಸಂಘಟನೆ ಇತ್ಯಾದಿ ವಿಚಾರಗಳಲ್ಲಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಸಂಘ ಪರಿವಾರವು ಎಂದಿನಂತೆ ತನ್ನ ಕೋಮುವಾದವನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಪಕ್ಷ ಮತ್ತು ಸಂಘಟನೆಗಳೊಂದಿಗೆ ಸೈದ್ಧಾಂತಿಕವಾದ ಭಿನ್ನಮತವಿದ್ದರೂ ಯಾವುದೇ ರೀತಿಯ ಆಕ್ರಮಣವನ್ನು ಪಿಎಫ್‌ಐ ಖಂಡಿಸುತ್ತದೆ ಮತ್ತು ಕಚೇರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್ ಒತ್ತಾಯಿಸಿದ್ದಾರೆ.