ಬಂದ್ ಗೆ ಬಿಲ್ಲವರ ಬೆಂಬಲವಿಲ್ಲ: ಸೌಹಾರ್ದ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ
ಮಂಗಳೂರು,ಫೆ.23: ದೇಶದಲ್ಲಿ ಬಿಲ್ಲವ ಸಮುದಾಯದ ಏಕೈಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳೂರಿನಲ್ಲಿ ಫೆ.25ರಂದು ನಡೆಸುವ ಸೌಹಾರ್ದ ಸಮಾವೇಶಕ್ಕೆ ಬಿಲ್ಲವರ ಸಂಪೂರ್ಣ ಬೆಂಬಲವಿದೆ ಎಂದು ದ.ಕ. ಜಿಲ್ಲಾ ಬಿಲ್ಲವ ಯೂನಿಯನ್ ಮುಖಂಡ ರಕ್ಷಿತ್ ಸುವರ್ಣ ಕೈಕಂಬ ಕರೆ ನೀಡಿದ್ದಾರೆ.
ಬಿಲ್ಲವರು ಸೇರಿದಂತೆ ಶೋಷಿತ ಹಿಂದುಳಿದ ಸಮಾಜಗಳ ಪ್ರತಿನಿಧಿಯಾಗಿರುವ ಪಿಣರಾಯಿ ವಿಜಯನ್ ಅವರ ಆಗಮನ ವಿರುದ್ಧ ಸಂಘ ಪರಿವಾರ ಪ್ರತಿಭಟನೆಗೆ ಕರೆ ನೀಡಿರುವುದು ಸಾಮಾಜಿಕ ನ್ಯಾಯದ ವಿರೋಧಿ ಯಾಗಿದೆ. ಹಿಂದುಳಿದ ವಗ೯ಗಳು ಉನ್ನತ ಸ್ಥಾನಕ್ಕೇರುವುದನ್ನು ಸಹಿಸದ ಸಂಘ ಪರಿವಾರವು ಕಳೆದ ಒಂದು ದಶಕದಲ್ಲಿ ಕರಾವಳಿ ಕನಾ೯ಟಕದಲ್ಲಿ ಬಿಲ್ಲವರ ಯುವಕರನ್ನು ಜೈಲಿಗಟ್ಟಿದ್ದೇ ಅದರ ಸಾಧನೆ.
1992ರಲ್ಲಿ ಕೇಂದ್ರ ಸರಕಾರವು ಹಿಂದುಳಿದ ವಗ೯ಗಳಿಗೆ ಮೀಸಲಾತಿ ಜಾರಿಗೆ ತರಲು ಮುಂದಾದಾಗ ಅದನ್ನು ವಿರೋಧಿಸಿ ಸಂಘಪರಿವಾರವು ರಥಯಾತ್ರೆ ನಡೆಸಿ, ಅಡ್ಡಿಪಡಿಸಿದನ್ನು ಹಿಂದುಳಿದ ವಗ೯ಗಳು ಮರೆತಿಲ್ಲ. ಅದೇ ರೀತಿ ಬಿಜೆಪಿ ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ಮೀಸಲಾತಿ ವಿರೋಧಿಸಿ ಸುಪ್ರೀಂಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದಾರೆ.
ಕರಾವಳಿಯಲ್ಲಿ ಕಳೆದ ಹಲವು ವಷ೯ಗಳಲ್ಲಿ ಸಂಘಪರಿವಾರದ ಪ್ರಚೋಧನೆಗೆ ಒಳಗಾಗಿ ನೂರಾರು ಬಿಲ್ಲವ ಯುವಕರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಯುವಕರು ಜೈಲು ಪಾಲಾಗಿದ್ದಾರೆ.
ಈ ಮೂಲಕ ಬಿಲ್ಲವ ಸಮಾಜದ ಉತ್ತಮ ಭವಿಷ್ಯವನ್ನು ಹೊಸಕಿ ಹಾಕುತ್ತಿರುವ ಸಂಘ ಪರಿವಾರವು ಇದೀಗ ಪಿಣರಾಯಿ ವಿಜಯನ್ ಅವರ ಮಂಗಳೂರು ಭೇಟಿಗೆ ಅಡ್ಡಿಪಡಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ.
ಫೆ.25ರಂದು ಮಂಗಳೂರು ನೆಹರು ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶವು ಬಿಲ್ಲವರ ಸ್ವಾಭಿಮಾನದ ಸಮಾವೇಶವಾಗಿದ್ದು, ಬಿಲ್ಲವರು ಸಕ್ರಿಯವಾಗಿ ಇದರಲ್ಲಿ ಪಾಲ್ಗೊಂಡು ಸಾಮಾಜಿಕ ನ್ಯಾಯದ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ರಕ್ಷಿತ್ ಸುವಣ೯ ಕೈಕಂಬ ಕರೆ ನೀಡಿದ್ದಾರೆ.