×
Ad

ಕೊಯ್ಲ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ?

Update: 2017-02-23 16:28 IST

ಉಪ್ಪಿನಂಗಡಿ, ಫೆ.23: ಕೊಯ್ಲ ಗ್ರಾಮದ ಗಂಡಿಬಾಗಿಲು ಸಮೀಪ ಸನ್ಯಾಸಿಮೂಲೆ ಪರಿಸರದಲ್ಲಿ ಒಂದು ಹೆಣ್ಣು ಚಿರತೆ ಮತ್ತು ಮೂರು ಪುಟ್ಟ ಮರಿಗಳೊಂದಿಗೆ ಪ್ರತ್ಯಕ್ಷವಾಗಿರುವ ಬಗ್ಗೆ ವರದಿಯಾಗಿದ್ದು, ಕಾಡಿನ ಅಂಚಿನಲ್ಲಿರುವ ಮಣ್ಣು ರಸ್ತೆ ಬದಿಯಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತುಗಳು ಕಂಡುಬಂದಿದೆ.

ಫೆ.22ರಂದು ಸಂಜೆ ಸನ್ಯಾಸಿಮೂಲೆ ಕಾಡಿನಿಂದ ಬಂದಿರುವ ಚಿರತೆ ಬೊಳುಂಬುಡ-ಗಂಡಿಬಾಗಿಲು ರಸ್ತೆಯಲ್ಲಿ ಓಡಾಡಿದೆ. ಇದನ್ನು ದೂರದಲ್ಲಿ ಮನೆ ಅಂಗಳದಲ್ಲಿ ನಿಂತು ಗಮನಿಸಿದ ಹುಡುಗನೋರ್ವ ತಕ್ಷಣ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದು, ನಾಲ್ವರು ಮಹಿಳೆಯರು ಚಿರತೆಯನ್ನು ತೀರಾ ಹತ್ತಿರದಿಂದ ನೋಡಿದ್ದಾರೆ. ಚಿರತೆ ಕಾಡಿನ ಅಂಚಿನಲ್ಲಿ ರಸ್ತೆಯಲ್ಲಿ ಸುಮಾರು 30 ಮೀಟರ್ ದೂರದ ತನಕ ಸಂಚರಿಸಿ ಬಳಿಕ ಮತ್ತೆ ಕಾಡಿನೊಳಗೆ ಹಿಂದಿರುಗಿದೆ. ಇನ್ನೊಮ್ಮೆ ಬೇರೆ ಕಡೆಯಲ್ಲಿ ಹೊರಬಂದು ಜನರ ಕಣ್ಣಿಗೆ ಬಿದ್ದಿದೆ ಎಂದು ಹೇಳಲಾಗಿದೆ.

ಅರಣ್ಯ ರಕ್ಷಕರ ಭೇಟಿ, ಪರಿಶೀಲನೆ:
ಚಿರತೆ ಪ್ರತ್ಯಕ್ಷಗೊಂಡ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅರಣ್ಯ ರಕ್ಷಕ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿದ ಹೆಜ್ಜೆ ಗುರುತುಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಹೆಜ್ಜೆ ಗುರುತು ಆಗಿರುವ ಸಾಧ್ಯತೆಯೂ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಎರಡು ವರ್ಷಗಳ ಹಿಂದೆಯೂ ಕಾಣಿಸಿಕೊಂಡಿತ್ತು:

ಎರಡು ವರ್ಷದ ಹಿಂದೆ ಇದೇ ಕಾಡಿಗೆ ಸಂಪರ್ಕ ಹೊಂದಿರುವ ವಲಕಡಮ ಕಾಡಿನಲ್ಲಿ ಚಿರತೆಯೊಂದು ನಾಯಿಯನ್ನು ಹಿಂಬಾಲಿಸಿಕೊಂಡು ಬಂದು ಬಾವಿಗೆ ಬಿದ್ದಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಬಾವಿಯಿಂದ ಮೇಲೇರಲು ಅನುವು ಮಾಡಿಕೊಟ್ಟಿದ್ದರು. ಇದೀಗ ಚಿರತೆ ಪ್ರತ್ಯಕ್ಷವಾಗಿರುವ ಕಾಡು ಹಿರೇಬಂಡಾಡಿ, ವಲಕಡಮ, ಕಟಾರ, ಶಾಂತಿಗೋಡು ಕಾಡು ಸಂಪರ್ಕ ಹೊಂದಿದ್ದು, ಈ ಕಾಡಿನೊಳಗೆ ಚಿರತೆ ಜಿಂಕೆ ಮೊದಲಾದ ಕಾಡು ಪ್ರಾಣಿಗಳು ಇರುವುದಾಗಿ ಹೇಳಲಾಗಿದೆ. ಹೀಗಾಗಿ ಈ ಪರಿಸರಕ್ಕೆ ಚಿರತೆ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News