×
Ad

ಸಂಘಪರಿವಾರದಿಂದ ಕೊಲೆಗಡುಕ ಸಂಸ್ಕೃತಿ : ಯಾದವ ಶೆಟ್ಟಿ

Update: 2017-02-23 16:37 IST

ಮೂಡುಬಿದಿರೆ, ಫೆ.23: ಅತ್ಯಧಿಕ ಹಿಂದೂಗಳನ್ನೇ ಕೊಂದಿರುವ ಸಂಘಪರಿವಾರದವರಿಗೆ ಕೇರಳದ ಮುಖ್ಯಮಂತ್ರಿ, ಕಮ್ಯುನಿಸ್ಟ್ ಸಿದ್ಧಾಂತದ ಧೀಮಂತ ನಾಯಕ ಪಿಣರಾಯಿ ವಿಜಯನ್ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ ಹೇಳಿದರು.

ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘಪರಿವಾರ, ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೊಲೆಗೀಡಾದ 13 ಮಂದಿ ಹಾಗೂ ಕೇರಳದಲ್ಲಿ ವಿವಿಧ ಜಿಲ್ಲೆಗಳಲ್ಲಿ ನಡೆದ ಹತ್ಯೆಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದರು.

ಕೇರಳದಲ್ಲಿ ಸುಮಾರು 300 ಮಂದಿ ಹಿಂದೂಗಳ ಹತ್ಯೆ ನಡೆಸಿರುವ ಸಂಘಪರಿವಾರ ಇಂದು ಕರಾವಳಿಯಲ್ಲಿ ಬಡ ಯುವಕರನ್ನು ಕ್ರಿಮಿನಲ್‌ಗಳನ್ನಾಗಿ ರೂಪಾಂತರಿಸುತ್ತಿದ್ದಾರೆ. ನಮ್ಮದು ಕೊಲೆಗಡುಕ ಸಂಸ್ಕೃತಿ ಅಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟರ ಸಂತತಿಯಿಂದ ಇಲ್ಲಿ ಕೋಮುವಾದದ ವಿಷ ಬೀಜ ಬಿತ್ತಲಾಗುತ್ತಿದೆ. ಕಾನೂನಾತ್ಮಕವಾಗಿ ಕರಾವಳಿ ಸೌಹಾರ್ದ ರ‍್ಯಾಲಿ ನಡೆಸುತ್ತಿದ್ದೇವೆ. ಸಿಪಿಐಎಂನಿಂದ ಕರಾವಳಿಯಲ್ಲಿ ಯಾವುದೇ ಕೊಲೆಯಾಗಿರುವ ಅಥವಾ ಅಂತಹ ಹಿನ್ನೆಲೆಯಿರುವ ನಾಯಕರು ನಮ್ಮಲ್ಲಿದ್ದರೆ ಅವರು ಬಹಿರಂಗಪಡಿಸಲಿಎಂದು ಅವರು ಸವಾಲೆಸೆದರು.

ಪಿಣರಾಯಿ ವಿಜಯನ್ ಕರೆಸಿರುವ ಉದ್ದೇಶವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯಾದವ ಶೆಟ್ಟಿ, ಪಿಣರಾಯಿ ವಿಜಯನ್ ಮಂಗಳೂರಿಗೆ ಬರುವುದಕ್ಕೆ ಅವರಿಗೆ ಸಂವಿಧಾನದತ್ತ ಹಕ್ಕಿದೆ. ಒಂದೊಮ್ಮೆ ಅವರು ಇಲ್ಲಿಗೆ ಬಂದರೆ ತಮ್ಮ ಮುಖವಾಡ ಕಳಚಿ ಬೀಳುವ ಸಂಘಪರಿವಾರದವರಿಗಿದೆ. ಬಂದ್‌ಗೆ ಕರೆಕೊಟ್ಟಿರುವುದು ಸಂವಿಧಾನಬಾಹಿರ ಕ್ರಮ. ಕರಾವಳಿಯ ಜನ ಸತ್ಯಸಂಗತಿಯನ್ನು ಅರಿಯಬೇಕು ಎಂಬ ಉದ್ದೇಶದಿಂದಲೇ ನಮ್ಮ ಪಕ್ಷದ ಮಹಾನ್ ನಾಯಕರನ್ನು ಕರೆಸಿಕೊಳ್ಳಲಾಗಿದೆ. ಬಹುಸಂಖ್ಯಾತ ಕೋಮುವಾದ ಎಲ್ಲಿ ಜಾರಿಯಲ್ಲಿರುತ್ತದೋ ಅಲ್ಲೆಲ್ಲಾ ಅಲ್ಪಸಂಖ್ಯಾತ ಕೋಮುವಾದವೂ ಮುನ್ನೆಲೆಗೆ ಬರುವ ಅಪಾಯವಿರುತ್ತದೆಎಂದರು.
 
ಕೇರಳದಲ್ಲಿ ಅಸ್ತಿತ್ವದಲ್ಲಿರುವ ಸಿಪಿಐಎಂ ಬಗ್ಗೆ ಸುಳ್ಳನ್ನೇ ಪ್ರಚಾರ ಮಾಡುತ್ತಿರುವ ಸಂಘಪರಿವಾರಕ್ಕೆ ಜನರು ಸತ್ಯ ತಿಳಿದುಕೊಂಡರೆ ತಿರುಗಿ ಬೀಳುತ್ತಾರೆ ಎಂಬ ಅರಿವಾಗಿ ಭಯಕ್ಕೆ ಬಿದ್ದಿದ್ದಾರೆ. ಕೇರಳ ಸರಕಾರದ ಅಭಿವೃದ್ಧಿಯ ಬಗ್ಗೆ ಕರ್ನಾಟಕ ಸರಕಾರದ ಜನಪ್ರತಿನಿಧಿಗಳು ಕೂಡಾ ಮೆಚ್ಚುಗೆ ಸೂಚಿಸಿದ್ದಾರೆ. ವಿವಿಧ ಯೋಜನೆಗಳ ಜಾರಿಯಲ್ಲಿ ಕೇರಳ 1 ಹಾಗೂ 2ನೇ ಸ್ಥಾನದಲ್ಲಿದ್ದರೆ ಗುಜರಾತ್ 18 ರಿಂದ 25ನೇ ಸ್ಥಾನದಲ್ಲಿದೆ. ಅದನ್ನು ಮರೆಮಾಚುವ ವ್ಯವಸ್ಥಿತ ತಂತ್ರ ಬಂದ್‌ಗೆ ಕರೆಕೊಟ್ಟಿರುವುದರ ಹಿನ್ನೆಲೆಯಲ್ಲಿ ಅಡಗಿದೆ. ಸಂಘ ಪರಿವಾರ ಹಾಗೂ ಬಿಜೆಪಿಗರು ಗುಪ್ತ ಅಜೆಂಡಾ ಹೊಂದಿದ್ದು, ಸಿಪಿಐಎಂ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಕೇರಳದಲ್ಲಿ ಸಂಘಪರಿವಾರದಿಂದ ಕೊಲೆ ಮಾತ್ರವಲ್ಲದೇ ಬಾಂಬ್ ಸ್ಪೋಟಗಳು ಹಾಗೂ ಇನ್ನಿತರ ಕ್ರಿಮಿನಲ್ ಚಟುವಟಿಕೆಗಳು ನಡೆದಿವೆಎಂದರು.

ಸಿಪಿಐಎಂ ನಾಯಕಿ ರಮಣಿ ಮಾತನಾಡಿ, ಮೋದಿ ಮಂಗಳೂರಿಗೆ ಬಂದಾಗ ನಾವೇನೂ ಬಂದ್‌ಗೆ ಕರೆನೀಡಿಲ್ಲ. ಸಂಘಪರಿವಾರದವರ ಉದ್ದೇಶ ಮತ್ತು ಕೃತ್ಯಗಳು ಜನವಿರೋಧಿಯಾಗಿವೆ. ಆದ್ದರಿಂದಲೇ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅನೇಕ ಮುಖಂಡರು ನಮಗೆ ಬೆಂಬಲ ಸಲ್ಲಿಸಿದ್ದಾರೆ. ಅಷ್ಟಕ್ಕೂ ಪಿನರಾಯಿ ವಿಜಯನ್ ಮಂಗಳೂರಿಗೆ ಬರಬಾರದು ಎಂದು ಹೇಳುವ ಯಾವುದೇ ಹಕ್ಕು ಸಂಘಪರಿವಾರದವರಿಗೆ ಇಲ್ಲ ಎಂದರು.

ಜಿಲ್ಲಾ ರೈತ ಸಂಘದ ಮೂಡುಬಿದಿರೆ ವಲಯಾಧ್ಯಕ್ಷ ಸುಂದರ ಶೆಟ್ಟಿ, ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಶಂಕರ ವಾಲ್ಪಾಡಿ, ರೈತ ಸಂಘದ ಕಾರ್ಯದರ್ಶಿ ಕೃಷ್ಣಪ್ಪ, ಗಿರಿಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News