ಗ್ಯಾಸ್ ಇದ್ದವರಿಗೆ 1 ಲೀ. ಸೀಮೆಎಣ್ಣೆ ವಿತರಣೆ: ಸಚಿವ ಖಾದರ್
ಮಂಗಳೂರು, ಫೆ.23: ನಗರ ಹೊರತುಪಡಿಸಿದ ಪ್ರದೇಶದಲ್ಲಿ ಗ್ಯಾಸ್ (ಅಡುಗೆ ಅನಿಲ) ಇದ್ದವರಿಗೆ 1 ಲೀ. ಸೀಮೆಎಣ್ಣೆ ವಿತರಿಸುವ ತೀರ್ಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದರು.
ಗುರುವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಲೆನಾಡು, ಗುಡ್ಡಗಾಡು ಪ್ರದೇಶ, ಪಶ್ಚಿಮಘಟ್ಟ ಪ್ರದೇಶದಲ್ಲಿ ಗ್ಯಾಸ್ ಹೊಂದಿದವರಿಗೆ 1 ಲೀಟರ್ ಸೀಮೆಎಣ್ಣೆ ವಿತರಿಸುವ ಬಹುದಿನದ ಬೇಡಿಕೆ ಈಡೇರಲಿದೆ ಎಂದು ಹೇಳಿದರು.
ಕೇಂದ್ರ ಸರಕಾರವು ಸೀಮೆಎಣ್ಣೆ ಮುಕ್ತ ರಾಷ್ಟ್ರ ಮಾಡುವ ಉದ್ದೇಶ ಹೊಂದಿದ್ದರೂ ಮಲೆನಾಡು, ಗುಡ್ಡಗಾಡು ಪ್ರದೇಶ, ಪಶ್ಚಿಮಘಟ್ಟ ಪ್ರದೇಶದಲ್ಲಿ ಜನರಿಗೆ ಸೀಮೆಎಣ್ಣೆಯ ಅಗತ್ಯವಿದೆ. ಮಧ್ಯಮ, ಬಡವರ್ಗದ ಜನರ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಗ್ಯಾಸ್ ಇಲ್ಲದವರಿಗೆ 3 ಲೀ. ಸೀಮೆಎಣ್ಣೆ ವಿತರಿಸಲಾಗುವುದು. ಗ್ಯಾಸ್ ಇದ್ದಲ್ಲಿ ಸೀಮೆಎಣ್ಣೆ ಬೇಕೆಂದು ಒಮ್ಮೆ ಅರ್ಜಿ ಸಲ್ಲಿಸಿದರೆ ಪ್ರತೀ ತಿಂಗಳು ಸೀಮೆಎಣ್ಣೆ ಪಡೆಯಬಹುದು ಎಂದು ಖಾದರ್ ತಿಳಿಸಿದರು.
ಸಕ್ಕರೆ ಸಬ್ಸಿಡಿ ರದ್ದು:
ಕೇಂದ್ರದ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಪಿಡಿಎಸ್ ಮೂಲಕ ವಿತರಿಸುವ ಸಕ್ಕರೆಯ ಅನುದಾನವನ್ನು ರದ್ದುಗೊಳಿಸಿದೆ. ಯುಪಿಎ ಸರಕಾರ ಪ್ರತಿ ಕೆಜಿಗೆ 18 ರೂ. ನೀಡುತ್ತಿತ್ತು. ಉಳಿದ ಹಣವನ್ನು ರಾಜ್ಯ ಸರಕಾರ ಭರಿಸುತ್ತಿತ್ತು. ಆದರೆ ಕಳೆದ ಬಜೆಟ್‌ನಲ್ಲಿ ಸಕ್ಕರೆಗೆ ಸಂಬಂಧಿಸಿದಂತೆ ಯಾವುದೇ ಅನುದಾನ ನೀಡಿಲ್ಲ. ಆ ಮೂಲಕ ಕೇಂದ್ರ ಮುಂದಿನ ದಿನಗಳಲ್ಲಿ ಸಬ್ಸಿಡಿಯನ್ನು ರದ್ದುಗೊಳಿಸುವ ಸೂಚನೆ ನೀಡಿದಂತಾಗಿದೆ. ಜನಸಾಮಾನ್ಯರಿಗೆ ಅಗತ್ಯವಾದ ಸಕ್ಕರೆ, ಆಹಾರ ಪದಾರ್ಥಗಳನ್ನು ರದ್ದುಪಡಿಸುತ್ತಿರುವುದು ಜನವಿರೋಧಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಡಿತರ ಆಹಾರ ಪದಾರ್ಥ ಸಾಕಷ್ಟು ಪ್ರಮಾಣದಲ್ಲಿ ಶೇಖರಣೆ ಇದೆ. ಆದರೆ ಆಹಾರ ಪದಾರ್ಥ ಸಾಗಾಟಕ್ಕೆ ತಾತ್ಕಾಲಿಕ ಸಮಸ್ಯೆಯಾಗಿದ್ದು, ತಕ್ಷಣ ಈ ಹಿಂದಿನಂತೆ ಸಾಗಿಸಲು ಕ್ರಮ ಕೈಗೊಳ್ಳಲಾಗುವುದು. ಪಡಿತರ ಕೂಪನನ್ನು ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇಲಾಖೆ ವತಿಯಿಂದ ಸೇವಾ ಕೇಂದ್ರವನ್ನು ತೆರೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಪಡಿತರ ಸೋರಿಕೆ ಕುರಿತು ದೂರುಗಳು ಕೇಳಿಬಂದಿದ್ದು, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ಭರವಸೆ ನೀಡಿದರು.
ಕೂಪನನ್ನು ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಲು ಅಂಗಡಿಯವರಿಗೆ 1 ಪಡಿತರ ಕೂಪನ್ ನೀಡಲು 10 ರೂ. ಸರಕಾರ ನೀಡಲಿದೆ. ಪಡಿತರ ಕುರಿತ ಅರ್ಜಿ ಹಾಗೂ ತಿದ್ದುಪಡಿ ಮಾಡಲು ನ್ಯಾಯಬೆಲೆ ಅಂಗಡಿಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಅರ್ಜಿ ಸಲ್ಲಿಕೆ:
ಎಪಿಎಲ್, ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. 4 ಅಂಶಗಳನ್ನೊಳಗೊಂಡ ಒಂದು ಅರ್ಜಿ ಪರಿಶೀಲನೆ ಮಾಡಲು ನ್ಯಾಯಬೆಲೆ ಅಂಗಡಿದಾರರಿಗೆ ಸರಕಾರದಿಂದ 20 ರೂ. ನೀಡಲಾಗುವುದು. ಆಹಾರ ಇಲಾಖೆಯ ಯೋಜನೆಗಳಿಗೆ ಕಂದಾಯ ಇಲಾಖೆಗಳು ಸಹಕಾರವನ್ನು ನೀಡಿದಾಗ ಯೋಜನೆ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿದೆ ಎಂದರು.
ಗುಣಮಟ್ಟದ ಪರೀಕ್ಷೆಗೆ ಉಪ್ಪು ಮತ್ತು ಎಣ್ಣೆಯನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಇಲ್ಲಿಯವರೆಗೆ ಪಾಮ್ ಆಯಿಲ್‌ನ್ನು ವಿತರಿಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ವಿತರಿಸಲಾಗುವುದು ಎಂದು ತಿಳಿಸಿದರು.
- ನಗರದಲ್ಲಿ ಸಿಪಿಎಂ ಹಮ್ಮಿಕೊಂಡ ಸೌಹಾರ್ದ ರ‍್ಯಾಲಿಯಲ್ಲಿ ಭಾಗವಹಿಸಲಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ರಾಜ್ಯ ಸರಕಾರ ಸೂಕ್ತ ರಕ್ಷಣೆಯನ್ನು ಒದಗಿಸಲಿದೆ. ರಾಜ್ಯದ ಮುಖ್ಯಮಂತ್ರಿಯೊಬ್ಬರು ಮತ್ತೊಂದು ರಾಜ್ಯಕ್ಕೆ ಭೇಟಿ ನೀಡಿದಾಗ ಸೂಕ್ತ ರಕ್ಷಣೆ ನೀಡುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಖಾದರ್ ತಿಳಿಸಿದರು.
- ತೊಕ್ಕೊಟ್ಟಿನಲ್ಲಿ ಸಿಪಿಎಂ ಕಚೇರಿಗೆ ಬೆಂಕಿ ಹಾಕಿರುವ ದುಷ್ಕ್ರತ್ಯ ಖಂಡನೀಯ. ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.