×
Ad

ಮಂಗಳೂರು: ಸೌಹಾರ್ದ ರ‍್ಯಾಲಿ ಪ್ರಚಾರಾರ್ಥವಾಗಿ ಸಿಪಿಎಂ ವತಿಯಿಂದ ಪಾದಯಾತ್ರೆ ಜಾಥ ಆರಂಭ

Update: 2017-02-23 18:32 IST

ಮಂಗಳೂರು, ಫೆ. 22: ಸೌಹಾರ್ದ ರ‍್ಯಾಲಿಯನ್ನು ನಿಲ್ಲಿಸಿ ಇಲ್ಲದಿದ್ದರೆ ಬಂದ್ ಕರೆ ನೀಡಿರುವುದನ್ನು ವಾಪಾಸು ಪಡೆಯಿರಿ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಂಘಪರಿವಾರಕ್ಕೆ ಸವಾಲು ಹಾಕಿದ್ದಾರೆ.

ಸಿಪಿಎಂ ವತಿಯಿಂದ ಫೆ. 25ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಕರಾವಳಿ ಸೌಹಾರ್ದ ರ್ಯಾಲಿ ಹಾಗೂ ಸಮಾವೇಶ ಪ್ರಯುಕ್ತ ಇಂದು ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಎಂ ಹಮ್ಮಿಕೊಂಡಿದ್ದ ಕಾಲ್ನಡಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಘಪರಿವಾರದ ಯಾವ ಬೆದರಿಕೆಗೂ ಮಣಿಯುವುದಿಲ್ಲ. ಬಂದ್ ಇದ್ದರೂ ಕಾಲ್ನಡಿಯಲ್ಲಾದರೂ ಬಂದು ನೆಹರೂ ಮೈದಾನದಲ್ಲಿ ಸೇರುವ ಮೂಲಕ ಸೌಹಾರ್ದ ಸಮಾವೇಶವನ್ನು ಯಶಸ್ವಿಗೊಳಿಸುತ್ತೇವೆ ಎಂದವರು ಸವಾಲು ಹಾಕಿದರು.

ಸಂಘಪರಿವಾರದ ಕಾರ್ಯಕರ್ತರು ತುಳುನಾಡಿನಲ್ಲಿ ಕೋಮು ಸಾಮರಸ್ಯವನ್ನು ಹಾಳು ಮಾಡುತ್ತಿದೆ. ಸುಮಾರು 25 ವರ್ಷಗಳಿಂದ ಕೋಮು ಸೌಹಾರ್ದವಾಗಿ ಜೀವಿಸುತ್ತಿದ್ದ ಜನರಲ್ಲಿ ಮತೀಯ ಕಲಹವನ್ನು ಹುಟ್ಟುಹಾಕಲಾಗಿದೆ. ಜನರನ್ನು ಧರ್ಮಾಧಾರದಲ್ಲಿ ಗುರುತಿಸುವ ಹಾಗೂ ದ್ವೇಷ ನೋಡುವ ಭಾವನೆ ಉದ್ಭವವಾಗಿದೆ ಎಂದರು.

ಬೇರೊಂದು ರಾಜ್ಯದ ಮುಖ್ಯಮಂತ್ರಿಯವರು ನಮ್ಮ ರಾಜ್ಯಕ್ಕೆ ಭೇಟಿ ನೀಡಿರುವುದನ್ನು ತಡೆಯಲು ಪ್ರಯತ್ನಿಸುವುದು ಸಂಘಪರಿವಾರದ ಹತಾಶೆ ಮತ್ತು ಆತಂಕವನ್ನು ತೋರಿಸುತ್ತದೆ. ಗುಜರಾತ್ ಕೋಮು ಗಲಭೆಯ ಬಳಿಕ ಅದೇ ರಾಜ್ಯ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಇತರ ರಾಜ್ಯಗಳಿಗೆ ಭೇಟಿ ನೀಡಿದಾಗ ನಿಷೇಧ ಹೇರಿಲ್ಲ. ಬಂದ್ ಮಾಡಿಲ್ಲ. ಆದರೆ, ಶೋಷಿತರ, ಜನಪರ ಹೋರಾಟಗಾರದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿಗೆ ತಡೆಯನ್ನುಂಟು ಮಾಡುವುದು, ಬಂದ್ ಆಚರಿಸುವುದು ಅಸಾಂವಿಧಾನಿಕವಾದುದು ಎಂದರು.

ಬಜರಂಗ ದಳದ ಮುಖಂಡರೊಬ್ಬರು ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೇಲೆ 11 ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ. ಆದರೆ, ಅದೇ ಮುಖಂಡರೊಬ್ಬರ ಮೇಲೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸುಮಾರು 100 ಪ್ರಕರಣಗಳು ದಾಖಲಾಗಿರಬಹುದು. ಪಿಣರಾಯಿ ವಿಜಯನ್ ಅವರು ಶೋಷಿತರ, ಕಾರ್ಮಿಕರ ಸಹಿತ ಜನಪರ ಹೋರಾಟಗಳಿಗಾಗಿ ಅವರ ಮೇಲೆ ಕೇಸ್‌ಗಳು ದಾಖಲಾಗಿವೆಯೇ ಹೊರತು ಹಲ್ಲೆ, ದೊಂಬಿ, ಕೋಮು ಸಘರ್ಷದಿಂದಾಗಿ ಅಲ್ಲ ಎಂದರು.

ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲೆಗೆ ಬೆಂಕಿ ಹಚ್ಚುವ ಬಗ್ಗೆ ಕೋಮು ಉದ್ರೇಕವಾಗಿ ಮಾತನಾಡಿದ್ದರು. ಇಂದು ಸಂಘಪರಿವಾರದ ಕಾರ್ಯಕರ್ತರು ಉಳ್ಳಾಲದ ಸಿಪಿಎಂ ಕಚೇರಿಗೆ ಬೆಂಕಿ ಹಚ್ಚಿದ್ದಾರೆ ಎಂದರು.

ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ನಿನ್ನೆ ರಾತ್ರಿ ತೊಕ್ಕೋಟಿನಲ್ಲಿ ಸಿಪಿಎಂ ಕಚೇರಿಗೆ ನುಗ್ಗಿ ಬೆಂಕಿ ಹಚ್ಚಿದ ಕೃತ್ಯವನ್ನು ತೀವ್ರವಾಗಿ ಖಂಡಿಸಿದರಲ್ಲದೆ, ನಾವು ಬೆಂಕಿ ಹಚ್ಚುವವರನ್ನು ವಿರೋಧಿಸುತ್ತೇವೆಯೇ ಹೊರತು ದ್ವೇಷಿಸುವುದಿಲ್ಲ. ಅವರನ್ನು ಸೌಹಾರ್ದಕ್ಕಾಗಿ ಆಹ್ವಾನಿಸುತ್ತಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಮುನೀರ್ ಕಾಟಿಪಳ್ಳ ಅವರು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಅವರಿಗೆ ಧ್ವಜವನ್ನುಹಸ್ತಾಂತರಿಸುವ ಮೂಲಕ ಪಾದಯಾತ್ರೆ ಜಾಥಾಕ್ಕೆ ಚಾಲನೆ ನೀಡಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಕಾರ್ಪೊರೇಟರ್ ದಯಾನಂದ ಶೆಟ್ಟಿ, ಯೋಗೀಶ್ ಜಪ್ಪಿನಮೊಗಲು, ಡಿವೈಎಫ್‌ಐ ಮುಖಂಡರಾದ ಸಂತೋಷ್ ಬಜಾಲ್, ಬಿ.ಕೆ.ಇಮ್ತಿಯಾಝ್, ಸಾದಿಕ್ ಕಣ್ಣೂರು, ಎಸ್‌ಎಫ್‌ಐನ ನಿತಿನ್ ಕುತ್ತಾರ್, ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ, ಮಾಜಿ ಕಾರ್ಪೊರೇಟರ್ ಜಯಂತಿ ಶೆಟ್ಟಿ, ನೌಷಾದ್ ಬೆಂಗರೆ, ಸಿಪಿಐಎಂ ಮುಖಂಡ ಸಂತೋಷ್ ಶಕ್ತಿನಗರ, ಭಾರತಿ ಬೋಳಾರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News