×
Ad

'ಹಿಂದೂತ್ವ ಸಂಘಟನೆಗಳ ಈ ಹರತಾಳ ರಾಜಕೀಯ ಪ್ರೇರಿತ'

Update: 2017-02-23 19:32 IST

ಉಡುಪಿ, ಫೆ.23: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಫೆ.25ರ ಮಂಗಳೂರಿನ ಸಾರ್ವಜನಿಕ ಕಾರ್ಯಕ್ರಮದ ವಿರುದ್ಧ ಹಿಂದೂತ್ವ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯ ಹರತಾಳಕ್ಕೆ ಕರೆ ನೀಡಿರುವುದನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸಿದೆ.

ಇದೊಂದು ರಾಜಕೀಯ ಪ್ರೇರಿತ ಕಾನೂನು ವಿರೋಧಿ ನಡವಳಿಕೆ ಎಂದು ಅಭಿಪ್ರಾಯಪಟ್ಟಿರುವ ಕೋಮು ಸೌಹಾರ್ದ ವೇದಿಕೆ, ಪಿಣರಾಯಿ ವಿಜಯನ್ ಭಾಗವಹಿಸುವ ಸೌಹಾರ್ದತೆಯ ಕಾರ್ಯಕ್ರಮಕ್ಕೆ ತನ್ನ ಸಂಪೂರ್ಣ ಬೆಂಬಲ ವನ್ನು ವ್ಯಕ್ತಪಡಿಸಿದೆ.

ಹಿಂದೂತ್ವವಾದಿಗಳ ಈ ಹರತಾಳದ ಕರೆಯು ಅವರ ಅಸಹನೆ, ಬಲತ್ಕಾರ ಮತ್ತು ದಬ್ಬಾಳಿಕೆಗಳ ಫ್ಯಾಸಿಸ್ಟ್ ಮನೋಧರ್ಮದ ಪ್ರತೀಕ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ಪಿಣರಾಯಿ ವಿಜಯನ್ ಅವರು ಕೇರಳ ರಾಜ್ಯದ ಜನತೆಯಿಂದ ಚುನಾಯಿತರಾಗಿ ಸಂವಿಧಾನಾತ್ಮಕವಾಗಿ ಮುಖ್ಯಮಂತ್ರಿಯಾದವರು. ಅವರು ಜಿಲ್ಲಾಡಳಿತದ ಸೂಕ್ತ ಅನುಮತಿಯೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂವಿಧಾನಾತ್ಮಕ ಹಕ್ಕನ್ನು ಹೊಂದಿದ್ದು, ಅದನ್ನು ತಡೆಯುವುದು ಸಂವಿಧಾನದ ಆಡಳಿತವನ್ನು ವಿರೋಧಿಸಿದಂತೆ ಎಂದು ವೇದಿಕೆ ಭಾವಿಸಿದೆ.

 ರಾಜ್ಯ ಸರಕಾರ ಈ ರೀತಿ ಬಲವಂತದ ಬಂದ್‌ಗೆ ಕರೆ ನೀಡಿ ಅದನ್ನು ಪ್ರಚುರಪಡಿಸುತ್ತಿರುವ ಸಂಘಟನೆಗಳ ಮೇಲೆ ಮತ್ತು ಅದರ ನಾಯಕರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವೇದಿಕೆ ಒತ್ತಾಯಿಸಿದೆ. ಒಂದು ವೇಳೆ ಇದರ ಬಗ್ಗೆ ಜಿಲ್ಲಾಡಳಿತ ನಿಗಾ ವಹಿಸಿ, ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದೆ ಜಿಲ್ಲೆಯಲ್ಲಿ ಇಂತಹ ಹೀನ ಚಾಳಿ ಮುಂದುವರೆದು ಅದರಿಂದ ಸಮಾಜದ ಸೌಹಾರ್ದತೆ ಮತುತಿ ಶಾಂತಿ ಪಾಲನಾ ವ್ಯವಸ್ಥೆಗಳಿಗೆ ಶಾಶ್ವತವಾದ ತೆರೆ ಬೀಳುವ ಸಾಧ್ಯತೆಗಳಿವೆ ಎಂದು ವೇದಿಕೆ ತಿಳಿಸಿದೆ.

ಆದುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ತನ್ನ ನೆರೆ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ಅತಿಥಿಯಾಗಿ ಭಾಗವಹಿಸುವ ಈ ಕಾರ್ಯಕ್ರಮಕ್ಕೆ ಸಂಪೂರ್ಣ ರಕ್ಷಣೆಯನ್ನು ಒದಗಿಸಬೇಕೆಂದು ವೇದಿಕೆ ಪತ್ರಿಕೆಗಳಿಗೆ ಬಿಡುಗಡೆ ಗೊಳಿಸಿದ ಹೇಳಿಕೆಯಲ್ಲಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News