ಮಂಗಳೂರು ಬಂದ್‌ಗೆ ಕರೆ ನೀಡಿದ ಹಿನ್ನೆಲೆ: ಬಸ್ ಸಂಚಾರ ಅಭಾದಿತ?
ಮಂಗಳೂರು, ಫೆ.23: ನಗರದಲ್ಲಿ ನಡೆಯುವ ಕರಾವಳಿ ಸೌಹಾರ್ದ ರ‍್ಯಾಲಿಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವುದನ್ನು ಖಂಡಿಸಿ ಸಂಘಪರಿವಾರ ಫೆ.25ರಂದು ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವನಾಡಿಯಾದ ಖಾಸಗಿ ಬಸ್‌ಗಳ ಓಡಾಟ ಇದೆಯೋ ಇಲ್ಲವೋ ಎಂಬ ಪ್ರಶ್ನೆ ಇದೀಗ ಪ್ರಯಾಣಿಕರಿಗೆ ಕಾಡತೊಡಗಿದೆ.
ಅಂದು ಸರಕಾರಿ ಬಸ್‌ಗಳು ಎಂದಿನಂತೆ ಸಂಚರಿಸಲಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದರೆ, ಖಾಸಗಿ ಬಸ್‌ಗಳ ಓಡಾಟದ ಬಗ್ಗೆ ಬಸ್ ಮಾಲಕರ ಸಂಘದಿಂದ ಇನ್ನೂ ಸ್ಪಷ್ಟ ನಿರ್ಧಾರ ವ್ಯಕ್ತವಾಗಿಲ್ಲ.
ಮಂಗಳೂರು ಪ್ರಭಾರ ಆರ್‌ಟಿಒ ರಮೇಶ್ ವರ್ಣೇಕರ್ ಗುರುವಾರ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್, ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ, ಪದಾಧಿಕಾರಿಗಳಾದ ರಾಮಚಂದ್ರ ಪಿಲಾರ್, ಸತೀಶ್ ತಲಪಾಡಿ, ಸುಚೇತನ್ ಕಾವೂರು ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
'ಬಸ್ ಸಂಚಾರ ಎಂದಿನಂತೆ ಓಡಾಡಲಿದೆ' ಎಂದು ಭರವಸೆ ನೀಡಿದ ಬಸ್ ಮಾಲಕರು, ಯಾವುದೇ ಹಾನಿಯಾಗದಂತೆ ಸೂಕ್ತ ರಕ್ಷಣೆ ನೀಡಬೇಕು ಎಂದು ಈ ಸಂದರ್ಭ ಒತ್ತಾಯಿಸಿದರು.
ಈ ಮಧ್ಯೆ ಸಂಘ ಪರಿವಾರದ ಸಂಘಟನೆಗಳು ನಗರದ ವಿವಿಧೆಡೆ ಮತ್ತು ಬಸ್‌ಗಳಲ್ಲಿ ಹರತಾಳಕ್ಕೆ ಕರೆ ನೀಡಿರುವ ಮತ್ತು ಬಸ್ ಬಂದ್ ಎಂಬ ಒಕ್ಕಣೆಯುಳ್ಳ ಭಿತ್ತಿಪತ್ರವನ್ನು ಹಚ್ಚಿರುವುರಿಂದ ಖಾಸಗಿ ಬಸ್‌ಗಳ ಓಡಾಟದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ನಗರ ಪೊಲೀಸ್ ಆಯುಕ್ತಾಲಯವಲ್ಲದೆ ಸಚಿವರು, ಶಾಸಕರು, ಫೆ.25ರಂದು ಯಾವುದೇ ಬಂದ್ ಇಲ್ಲ. ಅಂದು ಮಂಗಳೂರಿಗೆ ಆಗಮಿಸುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಹೇಳಿದ್ದಾರೆ.