ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದ ದೂರುಗಳಿದ್ದರೆ ಕಠಿಣ ಕ್ರಮ: ಜಸ್ಟಿಸ್ ವಿಶ್ವನಾಥ ಶೆಟ್ಟಿ
ಉಡುಪಿ, ಫೆ.23: ಶಿಕ್ಷಣ ಮತ್ತು ಆರೋಗ್ಯ, ಸ್ವಾಸ್ಥ್ಯ ಸಮಾಜದ ಮುಖ್ಯ ಅಂಗವಾಗಿದ್ದು, ಜಿಲ್ಲೆಯ ಜನತೆಗೆ ನೀಡುವ ಸೇವೆ ಮಾದರಿಯಾಗಿರಲಿ ಎಂದು ಕರ್ನಾಟಕದ ನೂತನ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.
ಗುರುವಾರ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾದ ಉಡುಪಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮುಂದಿನ ಐದು ವರ್ಷ ಈ ಜಿಲ್ಲೆಯಿಂದ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬರಬಾರದು ಎಂದವರು ಅಧಿಕಾರಿಗಳಿಗೆ ತಿಳಿಸಿದರು.
ಅಧಿಕಾರಿಗಳು ಸೇವೆಯನ್ನು ನಿಷ್ಠೆಯಿಂದ ಮಾಡಿದರೆ, ಜನರಿಗೆ ಸೇವೆ ನೀಡುವ ವೇಳೆ ಸಕಾರಾತ್ಮಾಕವಾಗಿ ಸ್ಪಂದಿಸುವುದರಿಂದ, ಲೋಕಾಯುಕ್ತಕ್ಕೆ ಬರುವ ದೂರುಗಳ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎಂದ ಅವರು, ಶಿಕ್ಷಣದ ಹಕ್ಕಿನಡಿ ಜಿಲ್ಲೆಯ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವ ಹೊಣೆ ಅಧಿಕಾರಿಗಳದು ಎಂದು ನೆನಪಿಸಿದರು.
ಜಿಲ್ಲೆಯಲ್ಲಿ ಕೊರಗ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಹೆಣ್ಣು ಮಕ್ಕಳು ಅರ್ಧದಲ್ಲೇ ಶಿಕ್ಷಣ ನಿಲ್ಲಿಸದಂತೆ ಪ್ರೇರಣಾ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ, ಕುಂಭಾಶಿಯ ಮಕ್ಕಳ ಮನೆ ಬಗ್ಗೆ ವಿದ್ಯಾಂಗ ಉಪನಿರ್ದೇಶಕರು ಲೋಕಾಯುಕ್ತರಿಗೆ ವಿವರಿಸಿದರು.
ಜಿಲ್ಲೆಯ ಶೈಕ್ಷಣಿಕ ಸ್ಥಿತಿಗತಿಯನ್ನು ಸವಿವರವಾಗಿ ಆಲಿಸಿದ ಅವರು, ಕೊರಗ ಮಕ್ಕಳ ಹೆತ್ತವರಿಗೆ ಆಯೋಜಿಸುವ ಕೌನ್ಸಿಲಿಂಗ್ ಕಾರ್ಯಕ್ರಮಕ್ಕೆ ಖುದ್ದು ಹಾಜರಾಗಿ ಹೆತ್ತವರೊಂದಿಗೆ ಮಾತನಾಡುವುದಾಗಿ ನುಡಿದರು.
ಆರೋಗ್ಯ ವ್ಯವಸ್ಥೆ ಸುಧಾರಣೆ: ಸರಕಾರಿ ಆರೋಗ್ಯ ವ್ಯವಸ್ಥೆ ಉತ್ತಮ ವಾಗಿರಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಲೋಕಾಯುಕ್ತ ನ್ಯಾಯಮೂರ್ತಿ, ಜನರು ಖಾಸಗಿ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆದು ಆರ್ಥಿಕವಾಗಿ ದಿವಾಳಿಯಾದ ಹಲವು ಉದಾಹರಣೆಗಳು ತಮ್ಮ ಮುಂದಿದ್ದು, ಸರಕಾರಿ ಆರೋಗ್ಯ ವ್ಯವಸ್ಥೆ ನಂಬಿಕಸ್ಥವಾಗಿ ಬೆಳೆಯಬೇಕು. ಈ ಬಗ್ಗೆ ಅನಾಮಿಕ ದೂರುಗಳು ತಮ್ಮ ಇಲಾಖೆಗೆ ಬರಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇರಬಾರದು. ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಸಿಜೇರಿಯನ್ ಹೆರಿಗೆ ದಂಧೆಯಾಗಿದ್ದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ ಎಂದರು.
ಕೃಷಿ, ತೋಟಗಾರಿಕೆ, ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ಧಿ, ಪಶುಸಂಗೋಪನೆ, ಕಂದಾಯ, ಪೊಲೀಸ್ ಇಲಾಖೆಗಳ ಪರಾಮರ್ಶೆ ಹಾಗೂ ಇಲಾಖಾ ಸಮಸ್ಯೆಗಳನ್ನು ಆಲಿಸಿದರು. ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಹೊಸದಾಗಿ ನೇಮಕಾತಿ ಮಾಡಲಿ ಎಂದು ಕಾಯದೆ ತಮ್ಮ ವ್ಯಾಪ್ತಿಯಲ್ಲೇ ಸಕಾರಾತ್ಮಕ ಚಿಂತನೆಗಳ ಮೂಲಕ ಪರಿಹರಿಸಿಕೊಳ್ಳಲು ಅವಕಾಶವಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂಬ ಕಿವಿ ಮಾತನ್ನು ಹೇಳಿದರು.
ಭ್ರಷ್ಟಾಚಾರ ಮಾತ್ರವಲ್ಲ, ಸಕಾಲದಲ್ಲಿ ಕರ್ತವ್ಯ ನಿರ್ವಹಣೆ ಮಾಡದಿರುವುದ ರ ವಿರುದ್ಧವೂ ಕ್ರಮಕೈಗೊಳ್ಳುವ ಅಧಿಕಾರ ಲೋಕಾಯುಕ್ತದ ವ್ಯಾಪ್ತಿಗೆ ಬರುತ್ತದೆ ಎಂದ ಲೋಕಾಯುಕ್ತರು, ಪಶುಪಾಲನೆ, ಕೃಷಿ, ತೋಟಗಾರಿಕಾ ವ್ಯವಸ್ಥೆಯನ್ನು ಸುಧಾರಿಸಲು ಕೈಗೊಂಡ ಕ್ರಮಗಳನ್ನು ಸವಿಸ್ತಾರವಾಗಿ ಆಲಿಸಿದರು.
ಪಂಚಾಯತ್‌ರಾಜ್ ಇಲಾಖೆ ಜನರಿಗೆ ಮೂಲ ಸೌಕರ್ಯ ಒದಗಿಸುತ್ತಿದ್ದು, ಪಂಚಾಯತ್ ಮಟ್ಟದಿಂದ ನರೇಗಾ, ವಸತಿ ಯೋಜನೆ, ಸ್ವಚ್ಛ ಭಾರತ್. ನೈರ್ಮಲ್ಯ, ತ್ಯಾಜ್ಯ ವಿಲೇ ಪ್ರಮುಖ ಕಾರ್ಯಕ್ರಮಗಳು ಎಂದು ಅಧಿಕಾರಿಗಳು ವಿವರಿಸಿದರು. ಪೈಪ್ ಕಂಪೋಸ್ಡ್‌ಗೆ ಪೈಪ್‌ಗಳನ್ನು ಉಚಿತವಾಗಿ ಕೊಡುವ ಬಗ್ಗೆ ಚಿಂತಿಸಿ. ಯೋಜನೆಗಳ ಅನುಷ್ಠಾನಕ್ಕೆ ಪ್ರೋತ್ಸಾಹನೀಡುವ ಕ್ರಮಗಳಿಂದ ಉದ್ದೇಶ ಈಡೇರುತ್ತದೆ ಎಂದರು.
ಈಗಲೂ ಶಕ್ತಿಯುತ:
ಲೋಕಾಯುಕ್ತ ಈಗಲೂ ಶಕ್ತಿಯುತವಾಗಿದೆ. ಎಲ್ಲ ರೀತಿಯಲ್ಲಿ ಜನರ ಹಿತವನ್ನು ಕಾಯಲು ಸಬಲವಾಗಿದೆ. ಎಲ್ಲ ಅಧಿಕಾರವನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ. ಅದೇನೂ ನಿಶ್ಯಕ್ತವಾಗಿಲ್ಲ ಎಂದು ಲೋಕಾಯುಕ್ತರು ಸ್ಪಷ್ಟ ಪಡಿಸಿದರು.
ಅರಣ್ಯ ಇಲಾಖೆಯಿಂದ ದೊರಕುವ ಯೋಜನೆಗಳ ಬಗ್ಗೆ ಡಿಸಿಎಫ್ ವಿವರಿಸಿದರು. ಅರಣ್ಯ ಸಂರಕ್ಷಣೆ ಅಗತ್ಯವಾಗಿ ನಡೆಯಬೇಕು. ಇಲಾಖೆ ವಿಜಿಲಂಟ್ ಆಗಿರಬೇಕು ಎಂದ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ, ಉತ್ತಮ ಗುಣಮಟ್ಟದ ಆಹಾರ ಪೂರೈಕೆಗೆ ಆನ್‌ಲೈನ್ ಮೂಲಕ ಎಲ್ಲ ರೇಷನ್ ಅಂಗಡಿಗಳ ಮೇಲೆ ಕಣ್ಣಿಡಿ. 15 ದಿನಗಳೊಳಗೆ ಇದನ್ನು ಅನುಷ್ಠಾನಕ್ಕೆ ತರಲು ಸೂಚನೆ ನೀಡಿದರು. ಫಲಾನುಭವಿಗಳಿಗೆ ಸರಿಯಾಗಿ ಆಹಾರಪದಾರ್ಥಗಳು ಲ್ಯವಾಗಲಿ ಎಂದರು.
ಮರಳುಗಾರಿಕೆ:
ಮರಳುಗಾರಿಕೆ ಜಿಲ್ಲೆಯನ್ನು ಕಾಡುತ್ತಿರುವ ಪ್ರಶ್ನೆ ಎಂಬ ಮಾಹಿತಿಯಿದ್ದು, ಮರಳುಗಾರಿಕೆಯಿಂದ ಊರಿಗೆ ಊರೇ ಹಾಳಾಗುತ್ತಿದೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಕಾನೂನು ಮೀರಿ ನಡೆದರೆ ಶಿಕ್ಷೆ ಖಂಡಿತ. ಮರಳುಗಾರಿಕೆಯಲ್ಲಿ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ. ಕರ್ತವ್ಯದಲ್ಲಿ ನಿರ್ಲಕ್ಷ್ಯ ಸಲ್ಲ. ಕಾನೂನು ಪಾಲಿಸಲು ಜಿಲ್ಲಾಧಿಕಾರಿಗಳ ನೆರವು ಪಡೆಯಿರಿ. ಜಿಲ್ಲೆಯಲ್ಲಿ ಮರಳು ದಂಧೆಗೆ ಅವಕಾಶ ನೀಡಬೇಡಿ. ರಾಶಿ ಮಾಡಿಟ್ಟ ಮರಳನ್ನು ವಶಪಡಿಸಿಕೊಳ್ಳಿ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಲೋಕಾಯುಕ್ತ ಎಸ್ಪಿ ರಶ್ಮಿ, ಅಪರ ಜಿಲ್ಲಾಧಿಕಾರಿ ಅನುರಾಧ, ಸಹಾಯಕ ಆಯುಕ್ತರಾದ ಶಿಲ್ಪಾ ನಾಗ್, ಅಡಿಷನಲ್ ಎಸ್ಪಿ ವಿಷ್ಣುವರ್ಧನ್ ಅವರನ್ನೊಳಗೊಂಡಂತೆ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಅಧಿಕಾರಿಗಳು ನೀಡಿದ ಮಾಹಿತಿಗಳು ಸತ್ಯವಾಗಿದ್ದರೆ ಸಂತೋಷ. ಇದಲ್ಲದೆ ಬೇರೆಯೇ ಪರಿಸ್ಥಿತಿ ಇದೆ ಎಂದು ಕಂಡು ಬಂದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುವುದು ಖಂಡಿತ . ಜನರಿಗಾಗಿ ರೂಪಿಸುವ ಕಾರ್ಯಕ್ರಮಗಳು ಜನರನ್ನು ತಲುಪಲೇಬೇಕು. ಇದಕ್ಕಾಗಿ ತಡೆ ಒಡ್ಡುವ ಕಾರಣಗಳ ಬಗ್ಗೆ ನನಗೆ ಮಾಹಿತಿಬೇಕು. ಸಾರ್ವಜನಿಕರ ಕೆಲಸಕ್ಕೆ ತೊಂದರೆಯಾಗಬಾರದು ಎಂಬುದು ಉದ್ದೇಶವಾಗಬೇಕು.
-ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ.