ನಾಗರಿಕ ಸೇವಾ ಪರೀಕ್ಷೆಗಳ ಹಿಂದೂಡಿಕೆ : ಜೂ.18ರಂದು ಪ್ರಿಲಿಮಿನರಿ ಪರೀಕ್ಷೆ

Update: 2017-02-23 14:46 GMT

ಹೊಸದಿಲ್ಲಿ,ಫೆ.23: ಐಎಎಸ್,ಐಪಿಎಸ್ ಇತ್ಯಾದಿ ನಾಗರಿಕ ಸೇವೆಗಳಿಗಾಗಿ ಪ್ರಿಲಿಮಿನರಿ ಪರೀಕ್ಷೆಯನ್ನು ಹಿಂದೂಡಲಾಗಿದ್ದು, ಈ ವರ್ಷ ಆಗಸ್ಟ್ ಬದಲಿಗೆ ಜೂನ್‌ನಲ್ಲಿ ನಡೆಯಲಿದೆ.

ಕೇಂದ್ರ ಲೋಕಸೇವಾ ಅಯೋಗ (ಯುಪಿಎಸ್‌ಸಿ)ವು ಮೂರು ವರ್ಷಗಳ ಬಳಿಕ ಜೂನ್‌ನಲ್ಲಿ ಈ ಪರೀಕ್ಷೆಯನ್ನು ನಡೆಸುತ್ತಿದೆ. 2014, 2015 ಮತ್ತು 2016ರಲ್ಲಿ ಈ ಪರೀಕ್ಷೆ ಆಗಸ್ಟ್‌ನಲ್ಲಿ ನಡೆದಿತ್ತು. 2013ರಲ್ಲಿ ಮೇ ತಿಂಗಳಲ್ಲಿ ಈ ಪರೀಕ್ಷೆ ನಡೆದಿತ್ತು.

2017ನೇ ಸಾಲಿನ ಪ್ರಿಲಿಮ್ಸ್ ಜೂ.18ರಂದು ನಡೆಯಲಿದೆ ಎಂದು ಅಧಿಕೃತ ಆದೇಶವು ತಿಳಿಸಿದೆ. ಈ ವರ್ಷ ಒಟ್ಟು 980 ಹುದ್ದೆಗಳಿಗೆ ಆಯ್ಕೆ ನಡೆಯಲಿದ್ದು, ಈ ಪೈಕಿ 27 ಹುದ್ದೆಗಳನ್ನು ದೈಹಿಕ ಅಂಗವಿಕಲರಿಗೆ ಮೀಸಲಿರಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳು,ಒಬಿಸಿಗಳಿಗೆ ಸರಕಾರವು ನಿಗದಿಗೊಳಿಸುವ ಮೀಸಲಾತಿ ಸೌಲಭ್ಯ ದೊರೆಯಲಿದೆ.

ಯುಪಿಎಸ್‌ಸಿಯು ಪ್ರತಿ ವರ್ಷ ಪ್ರಿಲಿಮಿನರಿ,ಮೇನ್ ಮತ್ತು ಸಂದರ್ಶನ... ಹೀಗೆ ಮೂರು ಹಂತಗಳಲ್ಲಿ ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುತ್ತದೆ.

ಪ್ರಿಲಿಮಿನರಿ ಪರೀಕ್ಷೆಗೆ 2017,ಮಾರ್ಚ್ 17ರ ಸಂಜೆ ಆರು ಗಂಟೆಯವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಭ್ಯರ್ಥಿಗಳಿಗೆ 2017,ಆಗಸ್ಟ್ 1ಕ್ಕೆ ಇದ್ದಂತೆ ಕನಿಷ್ಠ 21 ವರ್ಷಗಳಾಗಿರಬೇಕು ಮತ್ತು ಗರಿಷ್ಠ 32 ವರ್ಷ ಮೀರಿರಬಾರದು. ಕೆಲವು ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿದೆ.

ಪ್ರಿಲಿಮಿನರಿ ಪರೀಕ್ಷೆಗೆ ಕುಳಿತುಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ಒಂಭತ್ತು ಅವಕಾಶಗಳಿದ್ದು, ಇತರ ಜಾತಿಗಳಿಗೆ ಇದನ್ನು ಆರಕ್ಕೆ ಸೀಮಿತಗೊಳಿಸಲಾಗಿದೆ ಎಂದು ಆದೇಶವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News