ಮೂಡುಬಿದಿರೆಯ ಎಂಐಟಿಇಗೆ ಪ್ರತಿಷ್ಠಿತ ಕೆಪಿಐಟಿ ಸ್ಪಾರ್ಕಲ್ 2017ಗೆ ಪ್ಲಾಟಿನಂ ಪ್ರಶಸ್ತಿ
ಮಂಗಳೂರು.ಫೆ.23;ಮಂಗಳೂರು ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ ಕಾಲೇಜ್‌ನ ತಂಡ (ಎಂಐಟಿಇ)ಪುಣೆ ಡೆಕ್ಕನ್ ಗ್ರೌಂಡ್‌ನಲ್ಲಿ ಫೆ.18-19ರಂದು ನಡೆದ ರಾಷ್ಟ್ರ ಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ನೂತನ ಆವಿಷ್ಕಾರ ಮಾದರಿಗಳ ಪ್ರದರ್ಶನ ಕೆಪಿಐಟಿ ಸ್ಪಾರ್ಕಲ್ 2017 ಅಂತಿಮ ಸುತ್ತಿನಲ್ಲಿ ಆಯ್ಕೆಗೊಂಡು 10ಲಕ್ಷ ರೂ. ಮೊತ್ತದ ಪ್ಲಾಟಿನಂ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಜೇಶ್ ಚೌಟ ಸುದ್ದಿಗೊಷ್ಟಿಯಲ್ಲಿಂದು ತಿಳಿಸಿದ್ದಾರೆ.
ಮುಂಬಯಿಯ ಕೆಪಿಐಟಿ ಟಿಕ್ನಾಲಜಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಮೂರನೇ ಆವೃತ್ತಿಯ ಈ ಸ್ಪರ್ಧೆಯನ್ನು ದೇಶಾದ್ಯಂತ ವಿಜ್ಞಾನ ಹಾಗೂ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಹೊಸ ಸಂಶೋಧನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಿದೆ.ಈ ಬಾರಿ 'ಸ್ಮಾರ್ಟ್ ಸಿಟಿ ಟು ಸ್ಮಾರ್ಟ್ ಕೋಎಕ್ಸಿಟೆನ್ಸ್' ವಿಷಯದಲ್ಲಿ ಹಮ್ಮಿಕೊಂಡ ಸ್ಪರ್ಧೆಗೆ 10,500ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಂತಿಮವಾಗಿ 35ತಂಡಗಳನ್ನು ಆಯ್ಕೆ ಮಾಡಲಾಗಿತ್ತು.ಈ ಪೈಕಿ ಎಂಐಟಿಇಯ ಎರಡು ತಂಡಗಳು ಆಯ್ಕೆಯಾಗಿತ್ತು.ಬಳಿಕ ಅಂತಿಮ ಸುತ್ತಿನಲ್ಲಿ ಅಂತಿಮ ವರ್ಷದ ಎಂಐಟಿಇನ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಶರಾಫತ್ ಶಾಶು ವಿ.ಪಿ,ನಂದು ಜೆ.ಕೃಷ್ಣನ್,ಸೈಜು ವಿಜಯನ್ ಟಿ ಮತ್ತು ಆಸಿಫ್ ಅಬ್ದುಲ್ಲಾರನ್ನು ಒಳಗೊಂಡ ತಂಡ ಪ್ಲಾಟಿನಂ ಪ್ರಶಸ್ತಿಗೆ ಪಾತ್ರವಾಗಿದೆ.ತಂಡಕ್ಕೆ ಶಿವರಾಜ್ ಎ.ಸಿ ಮಾರ್ಗದರ್ಶಕರಾಗಿದ್ದರು.
ಈ ತಂಡ ಎಲೆಕ್ಟಿಕ್ ಇಂಧನ ತಂತ್ರಜ್ಞಾನ ಮಾದರಿಗೆ ಪ್ಲಾಟಿನಂ ಪ್ರಶಸ್ತಿ ಲಭಿಸಿದೆ.ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಪ್ರಶಸ್ತಿ ವಿತರಿಸಿದರು.
ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಕೆಪಿಐಟಿ ಸಂಸ್ಥೆ ಉದ್ಯೋಗ ನೀಡುವ ಅವಕಾಶವನ್ನು ಪ್ರಸ್ತಾಪಿಸಿದೆ.ಅಂತಿಮ 35ರ ಸುತ್ತಿನಲ್ಲಿ ಆಯ್ಕೆಯಾದ ಸಂಸ್ಥೆಯ ಇನ್ನೊಂದು ತಂಡ ತ್ಯಾಜ್ಯ ನೀರಿನಿಂದ ವಿದ್ಯುತ್ ಉತ್ಫಾದನೆ ಮಾದರಿ ಆಯ್ಕೆಯಾಗಿದೆ.ಐಐಟಿ ಹಾಗೂ ಎಂಐಟಿಯ ವಿದ್ಯಾರ್ಥಿಗಳನ್ನು ಮೀರಿಸುವ ಸಾಧನೆ ಮಾಡಿದ ಸಂಸ್ಥೆಯ ವಿದ್ಯಾರ್ಥಿಗಳ ಬಗ್ಗೆ ಅಭಿಮಾನಪಡುವುದಾಗಿ ರಾಜೇಶ್ ಚೌಟ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಂಐಟಿಇ ಯ ಪ್ರಾಂಶುಪಾಲ ಡಾ.ಜಿ.ಎಲ್.ಈಶ್ವರ ಪ್ರಸಾದ್,ಉಪ ಪ್ರಾಂಶುಪಾಲ ಡಾ.ಸಿ.ಆರ್.ರಾಜಶೇಖರ್ ಉಪನ್ಯಾಸಕರಾದ ಪದ್ಮ ಪ್ರಸಾದ್,ರವಿರಾಜ್ ಮೊದಲಾದವರು ಉಪಸ್ಥಿತರಿದ್ದರು.