ಬ್ರಿಟನ್‌ನಲ್ಲಿ ಸುರಕ್ಷಿತವಾಗಿದ್ದೇನೆ: ಮಲ್ಯ

Update: 2017-02-23 15:18 GMT

ಲಂಡನ್, ಫೆ. 23: ತನ್ನನ್ನು ಬ್ರಿಟನ್‌ನಿಂದ ಗಡಿಪಾರು ಮಾಡಲು ಇಲ್ಲಿನ ಅಧಿಕಾರಿಗಳಿಗೆ ಯಾವುದೇ ಕಾರಣವಿಲ್ಲ ಹಾಗೂ ತಾನು ಬ್ರಿಟನ್ ತೊರೆಯುವುದಿಲ್ಲ ಎಂದು ಮಾಜಿ ಉದ್ಯಮಿ ವಿಜಯ ಮಲ್ಯ ಹೇಳಿದ್ದಾರೆ.

ಭಾರತದ ಬ್ಯಾಂಕ್‌ಗಳಿಗೆ ಸುಮಾರು 9,000 ಕೋಟಿ ರೂ. ವಂಚಿಸಿ ಪಲಾಯನಗೈದಿರುವ ಮಾಜಿ ಮದ್ಯ ದೊರೆ ಈಗ ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ.

 ಚುನಾವಣೆಯ ಅವಧಿಯಲ್ಲಿ ತಾನು ಎರಡು ಪ್ರಮುಖ ರಾಜಕೀಯ ಪಕ್ಷಗಳ ನಡುವೆ ‘ರಾಜಕೀಯ ಫುಟ್ಬಾಲ್’ನಂತಾಗಿದ್ದೇನೆ ಎಂದು ಹೇಳಿಕೊಂಡರು.
ಫೋರ್ಸ್ ಇಂಡಿಯ ಫಾರ್ಮುಲಾ ವನ್ ತಂಡದ ಸಹಮಾಲೀಕನಾಗಿರುವ ಮಲ್ಯ, ಇಲ್ಲಿ ನಡೆದ ಫಾರ್ಮುಲಾ ವನ್ ಸ್ಪರ್ಧೆಯೊಂದರ ವೇಳೆ ಕಾಣಿಸಿಕೊಂಡರು. ಇಲ್ಲಿ ಅವರ ತಂಡವು ಸ್ಪರ್ಧೆಗೆ ಬಳಸುವ 2017ರ ಕಾರನ್ನು ಪರಿಚಯಿಸಿತು.

ಕಿಂಗ್‌ಫಿಶರ್ ಏರ್‌ಲೈನ್ಸ್‌ಗಾಗಿ ಪಡೆದುಕೊಂಡಿರುವ ಸಾಲವನ್ನು ಮಲ್ಯ ಮರುಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ, ಪಿತೂರಿ ಮತ್ತು ವಂಚನೆ ಮೊಕದ್ದಮೆಯನ್ನು ಅವರು ಭಾರತದಲ್ಲಿ ಎದುರಿಸಬೇಕಾಗಿದೆ.

ಸುಮಾರು ಒಂದು ವರ್ಷದಿಂದ ಮಲ್ಯ ಬ್ರಿಟನ್‌ನಿಂದ ಹೊರ ಹೋಗಿಲ್ಲ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತ್ರ ಅವರು ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ.

‘‘ನಾನು ಈ ದೇಶದಲ್ಲಿ ಈ ದೇಶದ ಕಾನೂನಿನಡಿಯಲ್ಲಿ ಸುರಕ್ಷಿತವಾಗಿದ್ದೇನೆ. ಭಾರತ ಸರಕಾರದ ಕೆಲವು ವಿಕ್ಷಿಪ್ತರ ಕರುಣೆಗೆ ಒಳಪಡಲು ನಾನು ಇಷ್ಟಪಡುವುದಿಲ್ಲ’’ ಎಂದು ಅವರು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News