ಪಕ್ಕದಲ್ಲೇ ನೂತನ ಸೌರವ್ಯೂಹ ; ಭೂಮಿ ಗಾತ್ರದ 7 ಗ್ರಹಗಳು

Update: 2017-02-23 15:35 GMT

ಕೇಪ್ ಕ್ಯಾನವರಲ್ (ಅಮೆರಿಕ), ಫೆ. 23: ನಮ್ಮ ಸೌರಮಂಡಲದ ಪಕ್ಕದಲ್ಲೇ ಇರುವ ಇನ್ನೊಂದು ಸೌರಮಂಡಲವೊಂದನ್ನು ಖಗೋಳ ವಿಜ್ಞಾನಿಗಳು ಪತ್ತೆಹಚ್ಚಿದ್ದು, ಅದರಲ್ಲಿ ಭೂಮಿ ಗಾತ್ರದ ಏಳು ಗ್ರಹಗಳಿವೆ. ಅತ್ಯಂತ ಗಮನಾರ್ಹ ವಿಷಯವೆಂದರೆ, ಈ ಏಳು ಗ್ರಹಗಳ ಪೈಕಿ ಮೂರು ಗ್ರಹಗಳು ಮೇಲ್ಮೈಯಲ್ಲಿ ನೀರಿನ ಅಸ್ತಿತ್ವಕ್ಕೆ ಪೂರಕವಾದ ಅಂತರದಲ್ಲಿ ತಮ್ಮ ಸೂರ್ಯನ ಸುತ್ತ ತಿರುಗುತ್ತಿವೆ ಎಂದು ಬುಧವಾರ ಪ್ರಕಟಗೊಂಡ ಸಂಶೋಧನೆಯೊಂದು ತಿಳಿಸಿದೆ

ಹಾಗಾಗಿ, ಈ ಗ್ರಹಗಳಲ್ಲಿ ಜೀವದ ಅಸ್ತಿತ್ವ ಇರುವ ಸಾಧ್ಯತೆಯಿದೆ ಎಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ.

ಈ ಗ್ರಹಗಳು ‘ಟ್ರಾಪಿಸ್ಟ್-1’ ಎಂಬ ಹೆಸರಿನ ಸಣ್ಣ ಹಾಗೂ ಮಂದ ನಕ್ಷತ್ರದ ಸುತ್ತ ತಿರುಗುತ್ತಿವೆ. ಅಕ್ವೇರಿಯಸ್ ಎಂಬ ಆಕಾಶಗಂಗೆಯಲ್ಲಿ ಇರುವ ಈ ನಕ್ಷತ್ರ ಭೂಮಿಯಿಂದ ಸುಮಾರು 40 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ.

ಈ ಸೌರಮಂಡಲವು ಸಮೀಪದಲ್ಲಿರುವುದು ಹಾಗೂ ಸಣ್ಣ ಮಾತೃ ನಕ್ಷತ್ರಕ್ಕೆ ಹೋಲಿಸಿದರೆ ಅದರ ಗ್ರಹಗಳ ಗಾತ್ರ ದೊಡ್ಡದಾಗಿರುವುದು ಖಗೋಳ ವಿಜ್ಞಾನಿಗಳ ಅಧ್ಯಯನಕ್ಕೆ ಹೇಳಿ ಮಾಡಿಸಿದ ವಿಷಯವಾಗಿದೆ. ಜೀವಿಗಳ ಸಂಭಾವ್ಯ ರಾಸಾಯನಿಕ ಬೆರಳಚ್ಚುಗಳಿಗಾಗಿ ಈ ಗ್ರಹಗಳ ವಾತಾವರಣವನ್ನು ಜಾಲಾಡುವ ಬಗ್ಗೆ ಅವರು ಯೋಚಿಸುತ್ತಿದ್ದಾರೆ.

‘‘ಹೊರ ಜಗತ್ತಿನಲ್ಲಿ ಜೀವವಿದೆಯೇ ಎಂಬ ಸಂಶೋಧನೆಯಲ್ಲಿ ನಾವು ಇನ್ನೊಂದು ಹೆಜ್ಜೆಯನ್ನು ಇಟ್ಟಿದ್ದೇವೆ ಎಂದು ನನಗನಿಸುತ್ತದೆ’’ ಎಂದು ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿ ಅಮಾರಿ ಟ್ರಿಯಾವುಡ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಈ ಸಂಶೋಧನೆ ಈ ವಾರದ ‘ನೇಚರ್’ ಪತ್ರಿಕೆಯ ಸಂಚಿಕೆಯಲ್ಲಿ ಪ್ರಕಟವಾಗಿದೆ. ‘ಟ್ರಾಪಿಸ್ಟ್-1’ ನಕ್ಷತ್ರದ ಸುತ್ತ ಮೂರು ಗ್ರಹಗಳು ಸುತ್ತುತ್ತಿವೆ ಎನ್ನುವುದನ್ನು ತೋರಿಸುವ ಹಿಂದಿನ ಸಂಶೋಧನೆಯ ಮುಂದುವರಿದ ಭಾಗ ನೂತನ ಸಂಶೋಧನೆಯಾಗಿದೆ.

ಈವರೆಗೆ ಸೌರವ್ಯೆಹದ ಹೊರಗೆ 3,500ಕ್ಕೂ ಹೆಚ್ಚಿನ ಗ್ರಹಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಸಂಶೋಧಕರು ಭೂಮಿಯ ಗಾತ್ರದ ಕಲ್ಲುಮಣ್ಣುಗಳಿಂದ ಕೂಡಿದ ಹಾಗೂ ಸೂಕ್ತ ಉಷ್ಣತೆ ಹೊಂದಿದ ಗ್ರಹಗಳಿಗಾಗಿ ಹುಡುಕಾಡುತ್ತಿದ್ದಾರೆ. ಯಾಕೆಂದರೆ, ಇಂತಹ ಗ್ರಹಗಳಲ್ಲಿ ನೀರಿದ್ದರೆ ಅದು ದ್ರವ ರೂಪದಲ್ಲಿರುತ್ತದೆ. ಇದು ಜೀವಿಗಳ ಅಸ್ತಿತ್ವಕ್ಕೆ ಅಗತ್ಯವಾದ ಪರಿಸ್ಥಿತಿ ಎಂದು ಭಾವಿಸಲಾಗಿದೆ.

ನಕ್ಷತ್ರದ ಅತಿ ಸಮೀಪದಲ್ಲಿ ವಾಸಯೋಗ್ಯ ವಲಯ

ಟ್ರಾಪಿಸ್ಟ್-1 ನಕ್ಷತ್ರದ ವ್ಯಾಸ ನಮ್ಮ ಸೂರ್ಯನ ವ್ಯಾಸದ ಕೇವಲ 8 ಶೇಕಡದಷ್ಟಿದೆ. ಹಾಗಾಗಿ, ಭೂಮಿ ಗಾತ್ರದ ಗ್ರಹಗಳು ಅದರ ಸುತ್ತ ತಿರುಗುವಾಗ ದೊಡ್ಡದಾಗಿ ಕಾಣುತ್ತವೆ.

ಟ್ರಾಪಿಸ್ಟ್-1 ನಕ್ಷತ್ರವು ತೀರಾ ಸಣ್ಣ ಹಾಗೂ ತಂಪು ಆಗಿರುವುದರಿಂದ ಅದರ ‘ವಾಸಯೋಗ್ಯ ವಲಯ’ವು ನಕ್ಷತ್ರದ ಅತಿ ಸಮೀಪದಲ್ಲಿದೆ.

ದ್ರವ ರೂಪದ ನೀರಿನ ಅಸ್ತಿತ್ವ ಸಾಧ್ಯವಿರುವ ಸ್ಥಳಗಳಲ್ಲೇ ಮೂರು ಗ್ರಹಗಳಿವೆ ಎಂದು ಮುಖ್ಯ ಸಂಶೋಧಕ ಮೈಕಲ್ ಗಿಲನ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News