ಸ್ವೀಡನ್ ಬಗ್ಗೆ ವಸ್ತುನಿಷ್ಠವಾಗಿ ವರದಿ ಮಾಡಿ :ಸುದ್ದಿ ಸಂಸ್ಥೆಗಳಿಗೆ ದೊರೆ ಒತ್ತಾಯ

Update: 2017-02-23 15:53 GMT

ಸ್ಟಾಕ್‌ಹೋಮ್ (ಸ್ವೀಡನ್), ಫೆ. 23: ವಲಸಿಗರಿಗೆ ಪ್ರವೇಶ ನೀಡಿದ ಬಳಿಕ ಸ್ವೀಡನ್ ಎದುರಿಸುತ್ತಿದೆ ಎನ್ನಲಾದ ಸಮಸ್ಯೆಗಳ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ, ದೇಶದ ಬಗ್ಗೆ ವಸ್ತುನಿಷ್ಠವಾಗಿ ವರದಿ ಮಾಡುವಂತೆ ದೊರೆ ಹದಿನಾರನೆ ಕಾರ್ಲ್ ಗುಸ್ತಾಫ್ ಸುದ್ದಿ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ.

ವರದಿ ಮಾಡುವಾಗ ಸಮತೋಲನ ಕಾಯ್ದುಕೊಳ್ಳುವಂತೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಸುದ್ದಿ ಸಂಸ್ಥೆಗಳನ್ನು ಒತ್ತಾಯಿಸಿದ್ದಾರೆ.

‘‘ಉತ್ತಮ ವಿಷಯಗಳನ್ನು ವರದಿ ಮಾಡುವುದು ಜಗತ್ತಿನಲ್ಲಿ ಸ್ವೀಡನ್‌ನ ಪ್ರತಿಷ್ಠೆಯನ್ನು ಕಾಯ್ದುಕೊಂಡು ಬರುವುದಕ್ಕೆ ಅಗತ್ಯವಾಗಿದೆ.’’ ಎಂದು 70 ವರ್ಷದ ದೊರೆ ಹೇಳಿದರು.

‘‘ಗಂಭೀರ ಹಾಗೂ ಉತ್ತಮ ಸುದ್ದಿ ಮೂಲ ಹೊಂದಿರುವ ಮಾಧ್ಯಮವಿಲ್ಲದಿದ್ದರೆ ಇದು ಕಷ್ಟ’’ ಎಂದು ಅವರು ಅಭಿಪ್ರಾಯಪಟ್ಟರು.

ಟ್ರಂಪ್ ಹೇಳಿಕೆ ನೀಡಿದ ಒಂದು ದಿನದ ಬಳಿಕ ಸ್ಟಾಕ್‌ಹೋಮ್‌ನ ಉಪನಗರವೊಂದರಲ್ಲಿ ಹಿಂಸಾಚಾರದ ಪ್ರಕರಣವೊಂದು ನಡೆದಿತ್ತು. ಅದರಲ್ಲಿ ವಲಸಿಗರು ಭಾಗಿಯಾಗಿದ್ದಾರೆನ್ನಲಾಗಿದೆ. ಈ ಸುದ್ದಿಯು ವಿಶ್ವಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು.

ವಲಸೆಗೆ ಸಂಬಂಧಿಸಿದಂತೆ ಸ್ವೀಡನ್‌ನಲ್ಲಿ ನಡೆಯುತ್ತಿರುವ ಸಂಶೋಧನೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘‘ಸಹಬಾಳ್ವೆಯ ವಿಷಯದಲ್ಲಿ ಉತ್ತಮ ಸಂಶೋಧನೆಗಳು ಮಾಲ್ಮೊ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿವೆ’’ ಎಂದು ಅವರು ಹೇಳಿದರು. ಮಾಲ್ಮೊ ಸ್ವೀಡನ್‌ನ ಮೂರನೆ ಅತಿ ದೊಡ್ಡ ನಗರವಾಗಿದ್ದು, ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಲಸಿಗರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News