ಸಂಶೋಧನೆ, ಅಭಿವೃದ್ಧಿಗೆ ಆದ್ಯತೆ ಸಿಗಬೇಕು: ಡಾ.ಕಾಕೋಡ್ಕರ್
ಉಡುಪಿ, ಫೆ.23: ಭಾರತದಲ್ಲಿ ದೇಶೀಯ ತಂತ್ರಜ್ಞಾನ, ಉತ್ಪಾದನೆಯಲ್ಲಿ ಪ್ರಗತಿ ಕಾಣಬೇಕಿದ್ದರೆ ಸಂಶೋಧನೆ ಹಾಗೂ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಆದ್ಯತೆ ಸಿಗುವಂತಾಗಬೇಕು ಹಾಗೂ ಇದಕ್ಕಾಗಿ ಭಾರತೀಯ ಮನೋಧರ್ಮದಲ್ಲಿ ಬದಲಾವಣೆಯಾಗಬೇಕು ಎಂದು ದೇಶದ ಖ್ಯಾತನಾಮ ಅಣು ವಿಜ್ಞಾನಿ ಹಾಗೂ ಭಾರತದ ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಡಾ.ಅನಿಲ್ ಕಾಕೋಡ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಮಣಿಪಾಲ ವಿವಿಯ ಜಿಯೋಪಾಲಿಟಿಕ್ಸ್ ಎಂಡ್ ಇಂಟರ್‌ನೇಷನಲ್ ರಿಲೇಷನ್ಸ್ ವಿಭಾಗದ ಸಹಯೋಗದಲ್ಲಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗ್ರಂಥಾಲಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಱವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿ ಹಾಗೂ ಭಾರತದ ರಾಷ್ಟ್ರೀಯ ಭದ್ರತೆಯ ಮೇಲೆ ಇದರ ಪರಿಣಾಮಗಳುೞಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.
ಭಾರತದಲ್ಲಿ ತಂತ್ರಜ್ಞಾನದ ಬೆಳವಣಿಗೆ ಆರಂಭಗೊಂಡಿದ್ದೇ ಮಿಲಿಟರಿ ಮೂಲಕ. ದೇಶದ ಭದ್ರತೆಗಾಗಿ ಹೊಸ ಹೊಸ ಸಂಶೋಧನೆಗಳು ನಡೆದು ವಿಜ್ಞಾನ ಹಾಗೂ ತಂತ್ರಜ್ಞಾನದ ಅಭಿವೃದ್ಧಿಯಾಗುತ್ತಾ ಸಾಗಿತು. ಮುಂದೆ ಅದರ ಪ್ರಯೋಜನ ಜನಸಾಮಾನ್ಯರಿಗೂ ತಲುಪುವಂತಾಯಿತು ಎಂದರು.
ತಂತ್ರಜ್ಞಾನದ ಬೆಳವಣಿಗೆ ಮಿಲಿಟರಿಯಿಂದ ಆರ್ಥಿಕ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರಕ್ಕೂ ವಿಸ್ತರಣೆಯಾಗುವಂತಾಯಿತು. ಇಂದು ತಂತ್ರಜ್ಞಾನವೆಂಬುದು ಶರವೇಗದಲ್ಲಿ ಅಭಿವೃದ್ಧಿ ಕಾಣುತ್ತಿದೆ. ಇದಕ್ಕಾಗಿ ಸರಕಾರ ಇಂದು ಭವಿಷ್ಯದ ವಿಷನ್ ಡಾಕ್ಯುಮೆಂಟ್‌ನ್ನು ಸಿದ್ಧಪಡಿಸಿದೆ ಎಂದು ಡಾ.ಕಾಕೋಡ್ಕರ್ ತಿಳಿಸಿದರು.
ಇದಕ್ಕಾಗಿಯೇ ಕೇಂದ್ರ ಸರಕಾರ ನೇಮಿಸಿದ 'ಟೈಪ್ಯಾಕ್' ಟೆಕ್ನಾಲಜಿ ವಿಷನ್ ಡಾಕ್ಯುಮೆಂಟ್-2035 ವರದಿಯನ್ನು ತಯಾರಿಸಿದ್ದು, ಇದನ್ನು ಕಳೆದ ವರ್ಷ ಮೈಸೂರಿನಲ್ಲಿ ನಡೆದ ವಿಜ್ಞಾನ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿಗಳು ಬಿಡುಗಡೆ ಗೊಳಿಸಿದ್ದರು. ಇದರಲ್ಲಿ ಶಿಕ್ಷಣ, ಸಾರಿಗೆ, ಉತ್ಪಾದನೆ, ಆಹಾರ, ಆರೋಗ್ಯ, ಕೃಷಿ ಮುಂತಾದ ಕ್ಷೇತ್ರಗಳ ಭವಿಷ್ಯದ ಮುನ್ನೋಟವಿದೆ. ಈವರೆಗೆ ಐದು ಕ್ಷೇತ್ರಗಳ ವಿಷನ್ ಡಾಕ್ಯುಮೆಂಟ್‌ನ್ನು ಬಿಡುಗಡೆಗೊಳಿಸಲಾಗಿದ್ದು, ಇನ್ನು ಏಳು ಕ್ಷೇತ್ರಗಳ ವರದಿ ಸಿದ್ಧಗೊಳ್ಳುತ್ತಿದೆ. ಇವುಗಳು ಆಸಕ್ತರಿಗೆ ಟೈಪ್ಯಾಕ್‌ನ ವೆಬ್‌ಸೈಟ್‌ನಲ್ಲಿ ಅಧ್ಯಯನಕ್ಕೆ ಲಭ್ಯವಿದೆ ಎಂದರು.
ತಂತ್ರಜ್ಞಾನ ಎಂಬುದು ನಿಂತ ನೀರಲ್ಲ. ಇಲ್ಲಿ ಸದಾ ಅಪ್‌ಡೆಟ್ ಆಗುತ್ತಾ ಸಾಗಬೇಕು. ಇಲ್ಲದಿದ್ದರೆ ಅಪ್ರಸ್ತುತ ಎನಿಸಿಕೊಳ್ಳುತ್ತದೆ. ಜಾಗತಿಕವಾಗಿ ಸ್ಪರ್ಧೆ ನೀಡಬೇಕಿದ್ದರೆ ತಂತ್ರಜ್ಞಾನದಲ್ಲಿ ಸದಾ ಅಪ್‌ಡೇಟ್ ಆಗುತ್ತಿರಬೇಕು. ಭಾರತೀಯರು ದೇಶದೊಳಗೆ ಹೆಚ್ಚಿನ ಸಾಧನೆ ಮಾಡದಿದ್ದರೂ, ಅದೇ ಅಮೆರಿಕ ಅಥವಾ ಬೇರೆ ದೇಶಗಳಿಗೆ ತೆರಳಿ ಅಲ್ಲಿ ವಿಶೇಷ ಸಾಧನೆ ಮಾಡಿ ಜಗತ್ತಿನ ಗಮನ ಸೆಳೆಯುತ್ತಾರೆ ಎಂದರು.
ಭಾರತೀಯರಿಗೆ ವಿದೇಶದ ಮೋಹ ಕಡಿಮೆಯಾಗಿಲ್ಲ. ನಿಮ್ಮ ಮನೆಯಲ್ಲಿ ರುವ ವಿವಿಧ ವಸ್ತುಗಳನ್ನು ಪರಿಶೀಲಿಸಿ. ಅದನ್ನು 20-30ವರ್ಷಗಳ ಹಿಂದಿನದಕ್ಕೆ ಹೋಲಿಸಿ ನೋಡಿ. ಈಗ ವಿದೇಶಿ ವಸ್ತುಗಳು ಹೆಚ್ಚಿನ ಸ್ಥಾನ ತುಂಬಿರುವುದನ್ನು ಕಾಣುತ್ತೇವೆ. ಎಷ್ಟೇಂದರೆ ಈಗ ಕುಡಿಯುವ ನೀರು, ಟೂತ್‌ಪೇಸ್ಟ್ ಸಹ ವಿದೇಶಿ ಬ್ರಾಂಡೇ ಆಗಿರುತ್ತದೆ ಎಂದವರು ಟೀಕಿಸಿದರು.
ದೇಶದಿಂದ ರಫ್ತಾಗುವ ಹಾಗೂ ದೇಶಕ್ಕೆ ಆಮದಾಗುವ ವಸ್ತುಗಳ ಪಟ್ಟಿಯನ್ನು ಪರಿಶೀಲಿಸಿ, 10ರಿಂದ 15 ವಸ್ತುಗಳು ಎರಡರಲ್ಲೂ ಸ್ಥಾನ ಪಡೆದಿರುವುದನ್ನು ಕಾಣುತ್ತೇವೆ. ಇದು ಹೇಗೆ ಸಾಧ್ಯ. ಉದಾಹರಣೆಗೆ ನಾವು ಕಚ್ಛಾ ಕಬ್ಬಿಣವನ್ನು ವಿದೇಶಗಳಿಗೆ ತೀರಾ ಅಗ್ಗದ ದರಕ್ಕೆ ರಫ್ತು ಮಾಡುತ್ತೇವೆ. ಅದೇ ದುಬಾರಿ ಬೆಲೆ ತೆತ್ತು ಅಲ್ಲಿಂದ ಉಕ್ಕನ್ನು ಆಮದು ಮಾಡಿಕೊಳ್ಳುತ್ತೇವೆ. ಇದನ್ನು ತಪ್ಪಿಸಿ, ನಮ್ಮ ವಸ್ತುಗಳನ್ನು ನಾವೇ ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡುವಂತಾದಾಗ ನಮ್ಮ ಪ್ರಗತಿ ಸಾಧ್ಯವಾಗುತ್ತದೆ.
ಇಂದು ಅಟೋಮೊಬೈಲ್, ಫ್ಯಾರ್ಮಸ್ಯೂಟಿಕಲ್, ಬಟ್ಟೆಗಳಲ್ಲಿ ನಾವು ವಿದೇಶಗಳಿಗೆ ರಫ್ತು ಮಾಡಿ ಒಳ್ಳೆಯ ಸಾದನೆ ತೋರುತಿದ್ದೇವೆ ಎಂದರು. ವಿದೇಶಗಳಲ್ಲೂ ಭಾರತೀಯರು ಉತ್ತಮ ಸಾಧನೆ ತೋರುತಿದ್ದಾರೆ. ಇತ್ತೀಚಿನ ಒಂದು ಅಂಕಿಅಂಶದ ಪ್ರಕಾರ ಅಮೆರಿಕದಲ್ಲಿ ಹೊಸ ಉದ್ಯಮ ಸ್ಥಾಪಿಸುವ ವಲಸಿಗರಲ್ಲಿ ಭಾರತೀಯರಿಗೆ ಅಗ್ರಸ್ಥಾನವಿದೆ. ಅದೇ ರೀತಿ ಅತೀ ಹೆಚ್ಚು ಮಂದಿಯನ್ನು ವಿದೇಶಗಳಿಗೆ ಕಳುಹಿಸುವ ವಿದ್ಯಾಸಂಸ್ಥೆಗಳಲ್ಲಿ ಭಾರತದ ಐಐಟಿ ನಾಲ್ಕನೇ ಸ್ಥಾನದಲ್ಲಿದೆ ಎಂದರು.