ಕೊಳವೆ ಬಾವಿ ಸಮಸ್ಯೆ: ಕಟಪಾಡಿ ಗ್ರಾಪಂಗೆ ಮುತ್ತಿಗೆ

Update: 2017-02-23 18:42 GMT

ಕಾಪು, ಫೆ.23: ಕಟಪಾಡಿ ಗ್ರಾಪಂ ವ್ಯಾಪ್ತಿಯ ಜೆಎನ್ ನಗರ ಜನತಾ ಕಾಲನಿಯಲ್ಲಿರುವ ಕೊಳವೆ ಬಾವಿಯಿಂದ ನೀರು ತೆಗೆಯುವುದಕ್ಕೆ ಸ್ಥಳೀಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿರುವುದನ್ನು ವಿರೋಧಿಸಿ ಸ್ಥಳೀಯ ನಾಗರಿಕರು ಬುಧವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಜನತಾ ಕಾಲನಿಗೆ ಕುಡಿಯುವ ನೀರು ಸರಬರಾಜು ಮಾಡಲು ಇಲ್ಲಿ ಕೊಳವೆ ಬಾವಿ ಕೊರೆಸಲಾಗಿತ್ತು. ಇದರಿಂದ ತಮ್ಮ ಬಾವಿಗೆ ತೊಂದರೆಯಾಗಿದೆ ಎಂದು ಸ್ಥಳೀಯ ನಿವಾಸಿ ರಾಜು ಮಾಸ್ಟರ್ ಆಕ್ಷೇಪ ವ್ಯಕ್ತಪಡಿಸಿ, ಕೊಳವೆ ಬಾವಿಯಿಂದ ನೀರು ತೆಗೆಯದಂತೆ ಗ್ರಾಪಂ, ಜಿಪಂ ಹಾಗೂ ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷರು ಈ ಕೊಳವೆ ಬಾವಿಯಿಂದ ನೀರು ತೆಗೆಯದಂತೆ ಕಟಪಾಡಿ ಪಿಡಿಒಗೆ ನಿರ್ದೇಶನ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಸ್ಥಳೀಯ ಮಹಿಳೆಯರು ಹಾಗೂ ಯುವಕರು ಖಾಲಿ ಕೊಡ, ಬಕೆಟ್‌ಗಳನ್ನು ಹಿಡಿದುಕೊಂಡು ಗ್ರಾಪಂ ಕಚೇರಿಗೆ ನುಗ್ಗಿ ಧರಣಿ ಕುಳಿತರು. ಈ ಹಿನ್ನೆಲೆಯಲ್ಲಿ ಆಕ್ಷೇಪ ಸಲ್ಲಿಸಿದ್ದ ರಾಜು ಮಾಸ್ಟರ್‌ರನ್ನು ಕಚೇರಿಗೆ ಕರೆಸಿ ಸಂಧಾನ ಸಭೆ ನಡೆಸಲಾಯಿತು. ಬೋರ್‌ವೆಲ್‌ನಿಂದ ನೀರು ಬಿಡುವುದರಿಂದ ಅವರ ಮನೆ ಬಾವಿಗೆ ತೊಂದರೆಯಾದರೆ ಅದನ್ನು ಪುನಶ್ಚೇತನಗೊಳಿಸುವುದು, ಒಂದೊಮ್ಮೆ ಬಾವಿ ಪೂರ್ತಿ ಬತ್ತಿ ಹೋದರೆ ಬಾವಿಯೊಳಗೆ ಗ್ರಾಪಂ ವತಿಯಿಂದಲೇ ಬೋರ್‌ವೆಲ್ ಕೊರೆದುಕೊಡುವುದು, ಅವರು ಅಪೇಕ್ಷಿಸಿದಲ್ಲಿ ಯಾವುದೇ ಶುಲ್ಕವಿಲ್ಲದೆ ಬೋರ್‌ವೆಲ್‌ನಿಂದ ಅವರಿಗೂ ನೀರು ಸಂಪರ್ಕ ಕಲ್ಪಿಸುವುದು ಹಾಗೂ ಇಲ್ಲಿಂದ ಜೆಎನ್ ನಗರ ಮತ್ತು ಕಜಕೋಡೆ ವ್ಯಾಪ್ತಿಗೆ ಮಾತ್ರ ನೀರು ಕೊಡುವ ಒಪ್ಪಂದ ಮಾಡಿಕೊಂಡು ಬಳಿಕ ಇದನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ನಿರ್ಣಯ ಮಾಡುವ ಭರವಸೆ ನೀಡಲಾಯಿತು. ವಾರದೊಳಗೆ ನೀರು ಸರಬರಾಜು ಮಾಡದಿದ್ದಲ್ಲಿ ಮತ್ತೆ ಪಂಚಾಯತ್‌ಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಲಾಯಿತು. ಕೊಳವೆ ಬಾವಿ ಸಮಸ್ಯೆ ಬಗೆಹರಿಯದಿದ್ದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News