ಅಮೇರಿಕ: ದ್ವೇಷದ ದಾಳಿಗೆ ಭಾರತೀಯ ಟೆಕ್ಕಿ ಬಲಿ

Update: 2017-02-24 04:36 GMT

ವಾಷಿಂಗ್ಟನ್, ಫೆ.24: "ನಮ್ಮ ದೇಶದಿಂದ ತೊಲಗಿ" ಎಂದು ಘೋಷಣೆ ಕೂಗಿದ ಅಮೆರಿಕನ್ ವ್ಯಕ್ತಿಯೊಬ್ಬ ಭಾರತೀಯ ಇಂಜಿನಿಯರ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಇತರ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಒಲಾಥ್‌ನಲ್ಲಿರುವ ಜರ್ಮಿನ್ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸ್ ಕುಂಚುಬೋತ್ಲಾ (32) ಹತ್ಯೆಗೀಡಾದ ಇಂಜಿನಿಯರ್. ಬುಧವಾರ ತಡರಾತ್ರಿ ನಡೆದ ಈ ದಾಳಿಯಲ್ಲಿ ಮತ್ತೊಬ್ಬ ಭಾರತೀಯ ಹಾಗೂ ಮೃತ ವ್ಯಕ್ತಿಯ ಸಹೋದ್ಯೋಗಿ ಅಲೋಕ್ ಮದಸಾನಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಅಲೋಕ್ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಗುಂಡಿನ ದಾಳಿಯಲ್ಲಿ ಇಯಾನ್ ಗ್ರಿಲ್ಲೋಟ್ ಎಂಬ ಮತ್ತೊಬ್ಬ ವ್ಯಕ್ತಿಯೂ ಗಾಯಗೊಂಡಿದ್ದಾರೆ.

ಆರೋಪಿ ಆಡಂ ಪುರಿಂಟೋನ್ (51) ಎಂಬಾತನನ್ನು ಘಟನೆ ನಡೆದ ಐದೇ ಗಂಟೆಯಲ್ಲಿ ಅಂದರೆ ಗುರುವಾರ ಮುಂಜಾನೆ ಬಂಧಿಸಲಾಗಿದೆ. ಇದು ದುರಂತ ಹಾಗೂ ವಿವೇಚನಾರಹಿತ ಹಿಂಸೆ ಎಂದು ಒಲಾಥ್ ಪೊಲೀಸ್ ಮುಖ್ಯಸ್ಥ ಸ್ಟೀವನ್ ಮೆಂಕೆ ಹೇಳಿದ್ದಾರೆ. ಗುಂಡು ಹಾರಿಸುವ ವೇಳೆ ಭಾರತೀಯ ಇಂಜಿನಿಯರ್‌ನನ್ನು ಕುರಿತು, "ಈ ದೇಶದಿಂದ ತೊಲಗಿ" ಎಂದು ದಾಳಿಕೋರ ಉದ್ಗರಿಸಿದ್ದಾಗಿ ಸ್ಥಳೀಯರು ಹೇಳಿದ್ದಾರೆ.

ನಿವೃತ್ತ ನೌಕಾಪಡೆ ಸಿಬ್ಬಂದಿಯಾದ ಪುರಿಂಟನ್ ತನಿಖೆಯ ವೇಳೆ, ಕನ್ಸಾಸ್ ನಗರದಲ್ಲಿ ಇಬ್ಬರು ಮಧ್ಯಪ್ರಾಚ್ಯ ಮೂಲದ ವ್ಯಕ್ತಿಗಳನ್ನೂ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಭಾರತೀಯ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸಂತ್ರಸ್ತರ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News