ಸುಳ್ಯ: ರಾಯರ ಮಠದ ಸಮುದಾಯ ಭವನ, ನವಗ್ರಹ ಮಂದಿರಕ್ಕೆ ಶಿಲಾನ್ಯಾಸ

Update: 2017-02-24 04:34 GMT

ಸುಳ್ಯ, ಫೆ.24: ಸುಳ್ಯ ತಾಲೂಕು ಶ್ರೀ ಗುರು ರಾಘವೇಂದ್ರ ಮಠ ನಿರ್ಮಾಣ ಸಮಿತಿ ಮತ್ತು ಸುಳ್ಯ ತಾಲೂಕು ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಿರ್ಮಾಣಗೊಳ್ಳುತ್ತಿರುವ ನವಗ್ರಹ ಮಂದಿರ ಹಾಗೂ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ಸುಳ್ಯದ ಶ್ರೀಚೆನ್ನಕೇಶವ ದೇವರ ಜಳಕದ ಕಟ್ಟೆ ಬಳಿ ಇರುವ ಮಠದ ಆವರಣದಲ್ಲಿ ನಡೆಯಿತು.

ಧಾರ್ಮಿಕ ಪರಿಷತ್ತಿನ ಸದಸ್ಯ ಜಗನ್ನಿವಾಸ ರಾವ್ ಅವರು ಸಮುದಾಯ ಭವನದ ಶಿಲಾನ್ಯಾಸ ನೆರವೇರಿಸಿ ಎ ಗ್ರೇಡ್‌ನ ದೇವಾಲಯಗಳು ಸಿ ಗ್ರೇಡ್ ನ ದೇವಾಲಯಗಳ ಅಭಿವೃದ್ಧಿಗೆ ಸಹಾಯಧನ ಒದಗಿಸುವ ಚಿಂತನೆಗೆ ಇಲಾಖೆಯಿಂದ ಒಪ್ಪಿಗೆ ದೊರೆತಿದೆ. ದೇವಾಲಯದ ಜಾಗದಲ್ಲಿ ಅರ್ಚಕರ ಮನೆ ನಿರ್ಮಿಸುವುದಾದರೆ ಅದಕ್ಕೆ ಇಲಾಖೆ ಅನುದಾನ ನೀಡುತ್ತದೆ ಎಂದರು. ನವಗ್ರಹ ಮಂದಿರಕ್ಕೆ ಐವರ್ನಾಡು ಶ್ರೀಪಂಚಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಾಲೆಪ್ಪಾಡಿ ಗಣಪಯ್ಯ ಭಟ್ ನೆರವೇರಿಸಿ , ಶುಭ ಹಾರೈಸಿದರು.
 
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರು ಗೋಪುರದ ಶಿಲಾನ್ಯಾಸಗೈದು ತುಂಗೆಯ ತಟದಲ್ಲಿ ಮಂತ್ರಾಲಯ ಬೆಳಗಿದಂತೆ , ಪಯಸ್ವಿನಿ ತಟದಲ್ಲಿರುವ ಸುಳ್ಯದ ರಾಯರ ಮಠವೂ ಮುಂದೆ ಪ್ರಸಿದ್ಧಿಗೆ ಬರವುದರಲ್ಲಿ ಸಂಶಯವಿಲ್ಲ ಎಂದು ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ರಾಘವೇಂದ್ರ ಮಠ ನಿರ್ಮಾಣ ಸಮಿತಿ ಗೌರವಾಧ್ಯಕ್ಷ , ಶಾಸಕ ಎಸ್.ಅಂಗಾರ ಅವರು ವಹಿಸಿ , ಧರ್ಮದಲ್ಲಿ ರಾಜಕೀಯ ಬೇಡ.ರಾಜಕೀಯದಲ್ಲಿ ಧರ್ಮ ಇರಲಿ. ಹಿಂದೂಗಳು ಒಗ್ಗೂಡುವುದರ ಮೂಲಕ ನಮ್ಮ ಶ್ರದ್ಧಾಕೇಂದ್ರಗಳು ಬೆಳಗಲಿ ಎಂದರು.

ಮಠ ನಿರ್ಮಾಣ ಸಮಿತಿ ಅದ್ಯಕ್ಷ, ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ ಕೆ.ವಿ.ಚಿದಾನಂದ ಅವರು ಮಾತನಾಡಿ ದೇವಾಲಯ, ವಿದ್ಯಾಲಯ, ಚಿಕಿತ್ಸಾಲಯ ಮತ್ತು ಇದೀಗ ಶೌಚಾಲಯ ಸುಸ್ಥಿತಿಯಲ್ಲಿದ್ದರೆ ನಾಡು ಅಭಿವೃದ್ದಿ ಹೊಂದುತ್ತದೆ ಎಂದರು.

ವೇದಿಕೆಯಲ್ಲಿ ಕ.ಸಾ.ಪ.ಸುಳ್ಯ ತಾಲೂಕು ಮಾಜಿ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ ಶುಭ ಹಾರೈಸಿದರು. ವಾಸ್ತು ತಜ್ಞ ಜಗನ್ನೀವಾಸ ರಾವ್, ಹಿರಿಯರಾದ ರಾಧಾಕೃಷ್ಣ ಕಲ್ಲೂರಾಯ , ಪುರೋಹಿತ ರಾಘವೇಂದ್ರ ಶಾಸ್ತ್ರಿ ಉಪಸ್ಥಿತರಿದ್ದರು.

ಮಠ ನಿರ್ಮಾಣ ಕಾರ್ಯಾಧ್ಯಕ್ಷ ಮುರಳೀಕೃಷ್ಣ , ಶಿವಳ್ಳಿ ಸಂಪನ್ನದ ಅಧ್ಯಕ್ಷ ರಮೇಶ ಸೋಮಯಾಗಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷ ನಾರಾಯಣಿ ಕಲ್ಲೂರಾಯ, ಮತ್ತು ಸುಮಾ ಸುಬ್ಬರಾವ್, ರಮೇಶ್ ಕುಮಾರ್, ದಿನೇಶ ಮಡಪ್ಪಾಡಿ, ಎಂ.ವೆಂಕಪ್ಪ ಗೌಡ, ಕೃಷ್ಣ ನಾವಡ, ಡಾ ಸುಬ್ಬರಾವ್ ಪಿ.ವಿ., ಪ್ರಭಾಕರ್ ನಾಯರ್, ರಾಮಚಂದ್ರ ಪಿ., ಚಂದ್ರಶೇಖರ , ಪಿ.ಎಲ್.ಮೂಡಿತ್ತಾಯ, ಗೋಪಾಲ್ ರಾವ್, ಡಾ ಶ್ರೀಕೃಷ್ಣ ಭಟ್ ಬಿ.ಎನ್., ರಾಜೇಶ್ ಆಚಾರ್, ಗಿರಿಧರ ಹೆಗ್ಡೆ, ಸುಬೋಧ್ ಶೆಟ್ಟಿ ಮೇನಾಲ, ಮಹೇಶ ಮೇನಾಲ, ಡಾ. ವೀಣಾ, ವೈ.ವಿ.ಫಾಲಚಂದ್ರ, ಶಶಿಧರ ಎಂ.ಜೆ., ಪಿ.ಎಂ.ರಂಗನಾಥ್, ಎಂ.ವಿ.ಗಿರಿಜಾ, ರಾಧಾಕೃಷ್ಣ ಕಲ್ಲೂರಾಯ ಮೈಸೂರು, ಆನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಠ ನಿರ್ಮಾಣ ಸಮಿತಿ ಕಾರ್ಯದರ್ಶಿ ಪಿ.ಬಿ.ಸುಧಾಕರ ರೈ ಸ್ವಾಗತಿಸಿ, ಬೃಂದಾವನ ಟ್ರಸ್ಟ್‌ನ ಕಾರ್ಯದರ್ಶಿ ಪ್ರವೀಣ್ ರಾವ್ ವಂದಿಸಿದರು. ಪ್ರಕಾಶ್ ಮೂಡಿತ್ತಾಯ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News