ಉತ್ತರ ಪ್ರದೇಶದಿಂದ ಬಿಜೆಪಿಯ ಗಾಂಧಿ ನಾಪತ್ತೆಯಾಗಿದ್ದು ಏಕೆ ?

Update: 2017-02-24 06:00 GMT

ಲಕ್ನೌ, ಫೆ.24: ಸುಲ್ತಾನ್ ಪುರ್ ಕ್ಷೇತ್ರದ ಬಿಜೆಪಿ ಸಂಸದ ವರುಣ್ ಗಾಂಧಿ ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದ ಎಲ್ಲಾ ಹಂತದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಗೈರು ಹಾಜರಾಗಿರುವುದು ಅವರ ಹಾಗೂ ಪಕ್ಷದ ನಡುವೆ ಆಳವಾಗುತ್ತಿರುವ ಕಂದಕದತ್ತ ಬೊಟ್ಟು ಮಾಡುತ್ತಿವೆ. ಅವರ ಸುಲ್ತಾನ್‌ಪುರ ಕ್ಷೇತ್ರದಲ್ಲಿ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಿದ್ದರೂ ಹಾಗೂ ಇಲ್ಲಿ ಫೆಬ್ರವರಿ 27ರಂದು ಚುನಾವಣೆಗಳು ನಡೆಯಲಿದ್ದರೂ ವರುಣ್ ಮಾತ್ರ ಅತ್ತ ಪ್ರಚಾರ ಕಾರ್ಯಕ್ಕಾಗಿ ತಲೆ ಹಾಕಿಲ್ಲ. ಅವರ ತಾಯಿ ಮೇನಕಾ ಗಾಂಧಿ ಮೋದಿ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿರುವ ಹೊರತಾಗಿಯೂ ವರುಣ್ ಅವರ ಬಿಜೆಪಿಯೊಂದಿಗಿನ ಸಂಬಂಧ ಉತ್ತಮಗೊಂಡಿಲ್ಲ.

ಅದಕ್ಕೆ ಕಾರಣಗಳು ಇಲ್ಲಿವೆ.

1. ಎರಡನೇ ಬಾರಿ ಸಂಸದರಾಗಿರುವ ವರುಣ್ ಅವರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದೆಂದು ಅಂದಾಜಿಸಲಾಗಿದ್ದರೂ ಅಮಿತ್ ಶಾ ಅದಕ್ಕೆ ಅವಕಾಶ ನೀಡಲಿಲ್ಲ. ಇದೇ ಕಾರಣಕ್ಕೆ ವರುಣ್ ಪಕ್ಷಕ್ಕೆ ಸಂಬಂಧ ಪಡದ ಚಟುವಟಿಕೆಗಳಲ್ಲಿ ತಮ್ಮನ್ನು ವ್ಯಸ್ತ ರಾಗಿಸಿದರು. ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದರಿಂದ ಹಿಡಿದು ಭಾಷಣಗಳನ್ನು ಅವರು ನೀಡಲು ಅವರು ಆರಂಭಿಸಿದ್ದರು.

2. ವರುಣ್ ಅವರ ಹಲವು ಬೆಂಬಲಿಗರಿಗೆ ಅಮಿತ್ ಶಾ ಟಿಕೆಟ್ ನಿರಾಕರಿಸಿದ್ದಾರೆ. ಕೆಲವರಂತೂ ಚುನಾವಣೆ ಸ್ಪರ್ಧಿಸಲು ಪಕ್ಷಾಂತರಗೊಂಡಿದ್ದಾರೆ. ವರುಣ್ ಅವರ ವೈರಿಗಳು ಟಿಕೆಟ್ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅವರಲ್ಲಿ ಹಲವರು ಅವರ ಕ್ಷೇತ್ರದ ಅಸೆಂಬ್ಲಿ ಸೀಟುಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ.

3. ಶಾ ಅವರು ವರುಣ್ ಅವರನ್ನು 2014ರಲ್ಲಿಯೇ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಸಿದ್ದರಲ್ಲದೆ ರಾಜ್ಯ ಘಟಕದ ಎಲ್ಲಾ ಜವಾಬ್ದಾರಿಗಳನ್ನೂ ಅವರಿಂದ ಸೆಳೆದುಕೊಂಡಿದ್ದಾರೆ.

4. ಶಸ್ತ್ರಾಸ್ತ್ರ ವ್ಯಾಪಾರಿಯೊಬ್ಬ ಹನಿಟ್ರ್ಯಾಪ್ ಮೂಲಕ ರಕ್ಷಣಾ ರಹಸ್ಯಗಳನ್ನು ವರುಣ್ ಅವರ ಬಾಯಿಯಿಂದ ಕೇಳಿ ತಿಳಿದುಕೊಂಡಿದ್ದರೆಂದು ಅಕ್ಟೋಬರ್ ತಿಂಗಳಲ್ಲಿ ಮಧ್ಯವರ್ತಿಯೊಬ್ಬ ಬಾಯ್ಬಿಟ್ಟಾಗ ವರುಣ್ ಮತ್ತು ಪಕ್ಷದ ನಡುವಣ ಸಂಬಂಧದಲ್ಲಿ ಬಿರುಕು ಮೂಡಿತ್ತು. ವರುಣ್ ತಮ್ಮ ವಿರುದ್ಧದ ಆರೋಪ ನಿರಾಕರಿಸಿದ್ದರೂ ಬಿಜೆಪಿ ಅವರ ಸಮರ್ಥನೆಗೆ ಬರಲಿಲ್ಲ. ವರುಣ್ ರಾಜಕೀಯ ಜೀವನವನ್ನು ಕೊನೆಗೊಳಿಸಲು ಬಿಜೆಪಿ ನಾಯಕರು ಆಡಿದ ಆಟವಿದೆಂದು ಅವರ ಬೆಂಬಲಿಗರು ಆಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News