ತಾಕತ್ತಿದ್ದರೆ ಸಂಜೆಯೊಳಗೆ ವಿವರ ನೀಡಿ: ಪೂಜಾರಿ
ಮಂಗಳೂರು, ಫೆ.24: ರಾಜ್ಯ ಸರಕಾರದ ಸಚಿವರಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ನೂರಾರು ಕೋಟಿ ರೂ. ಕಪ್ಪ ನೀಡಲಾಗಿದೆ ಎಂದು ಬಿಜೆಪಿ ಎಲ್ಲಾ ಪಕ್ಷಗಳ ಮಾನವನ್ನು ದೇಶದ ಎದುರು ಹರಾಜು ಹಾಕಿದೆ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಆಪಾದಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಪ್ಪ ನೀಡಲಾಗಿದೆ ಎನ್ನಲಾದ ಡೈರಿಯನ್ನು ಬಿಡುಗಡೆ ಮಾಡಿರುವ, ಜವಾಬ್ಧಾರಿ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಾಕತ್ತಿದ್ದರೆ ಇಂದು ಸಂಜೆಯೊಳಗೆ ಡೈರಿಯಲ್ಲಿನ ವಿವರವನ್ನು ಬಹಿರಂಗಪಡಿಸಬೇಕು ಎಂದು ಅವರು ಸವಾಲೆಸೆದರು.
ಸಿಬಿಐನಿಂದ ಪ್ರಕರಣ ತನಿಖೆ ಮಾಡಿದರೆ ಸೂಕ್ತವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಸುಪ್ರೀಂ ಕೋರ್ಟ್‌ನ ಪ್ರಸಕ್ತ ನ್ಯಾಯಾಧೀಶರನ್ನು ನೇಮಕ ಮಾಡಿ ಅವರಿಂದ ತನಿಖೆ ಮಾಡಿಸಬೇಕು ಎಂದು ಅವರು ಅಭಿಪ್ರಾಯಿಸಿದರು.ಡೈರಿಯನ್ನು ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿ ತನಿಖೆ ಮಾಡುವುದು ಕೇಂದ್ರ ಸರಕಾರದ ಕರ್ತವ್ಯ. ಯಾವುದೇ ರೀತಿಯ ತನಿಖೆಯನ್ನು ಎದುರಿಸಲು ಕಾಂಗ್ರೆಸ್ ಸಿದ್ಧ ಎಂದವರು ಹೇಳಿದರು. ಡೈರಿ ಪ್ರಕರಣದಿಂದ ಕಾಂಗ್ರೆಸ್ ಮಾತ್ರವಲ್ಲ, ಎಲ್ಲಾ ಪಕ್ಷಗಳ ಮಾನ ಹರಾಜಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್‌ನ ಅರುಣ್ ಕುವೆಲ್ಲೋ, ಕಳ್ಳಿಗೆ ತಾರನಾಥ ಶೆಟ್ಟಿ, ಅಜಿತ್ ಕುಮಾರ್, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.