ಮಂಗಳೂರು: ಅಶಾಂತಿ ಸೃಷ್ಟಿಸುವವರ ಮೇಲೆ ಕ್ರಮಕ್ಕೆ ಎಸ್‌ಡಿಪಿಐ ಒತ್ತಾಯ
ಮಂಗಳೂರು, ಫೆ.24: ತೊಕ್ಕೊಟ್ಟುವಿನ ಸಿಪಿಎಂ ಪಕ್ಷದ ಕಚೇರಿಯನ್ನು ರಾತ್ರಿ ಹೊತ್ತು ದುಷ್ಕರ್ಮಿಗಳು ಬೆಂಕಿ ಹಚ್ಚಿ ಧ್ವಂಸಗೈದ ಘಟನೆಯನ್ನು ಮತ್ತು ಕಾರ್ಯಕ್ರಮದ ಭಿತ್ತಿಪತ್ರಗಳನ್ನು ಹರಿದು ಹಾಕುವಂತಹ ನೀಚ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಎಸ್‌ಡಿಪಿಐ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಈ ಕೃತ್ಯವು ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂಬ ಸಂಸದರ ಹೇಳಿಕೆಯ ಮುಂದುವರಿದ ಭಾಗವಾಗಿದೆ ಎಂಬ ಸಂಶಯಕ್ಕೆ ಎಡೆಮಾಡಿದೆ. ಫೆಬ್ರವರಿ 25 ರಂದು ಮಂಗಳೂರಿನಲ್ಲಿ ಸಿಪಿಎಂ ಪಕ್ಷ ನಡೆಸಲಿರುವ ಕರಾವಳಿ ಸೌಹಾರ್ಧ ಸಮಾವೇಶಕ್ಕೆ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸುತ್ತಾರೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಸಂಘಪರಿವಾರ ಕಾರ್ಯಕ್ರಮದ ವಿರುದ್ಧವಾಗಿ ಪ್ರತಿಭಟನೆ ಮತ್ತು ಫೆಬ್ರವರಿ 25 ರಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್‌ಗೆ ಕರೆಯನ್ನು ನೀಡಿ ಇಡೀ ಜಿಲ್ಲೆಯಲ್ಲಿ ಕೋಮು ದ್ವೇಷವನ್ನು ಹರಡಿಸಿ ಜಿಲ್ಲೆಯ ಶಾಂತಿಯನ್ನು ಕೆದಡಿಸುವಂತಹ ಹುನ್ನಾರವನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ.
ಸಂಘಪರಿವಾರ ಬಂದ್‌ಗೆ ಕರೆಕೊಟ್ಟು ಜಿಲ್ಲೆಯ ನೆಮ್ಮದಿ ಕೆಡಿಸಿ ಜನಸಮಾನ್ಯರಿಗೆ ತೊಂದರೆಯನ್ನು ನೀಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಇದು ಸಂಘಪರಿವಾರದ ಚಾಳಿಯಾಗಿ ಬಿಟ್ಟಿದೆ. ಇಷ್ಟೆಲ್ಲಾ ನಡೆಯುತ್ತಿರುವಾಗಲೂ ಇದರ ಬಗ್ಗೆ ಕಠಿಣ ಕ್ರಮ ಜರಗಿಸಿ ಅಶಾಂತಿಯನ್ನು ಸೃಷ್ಟಿಸುವವರನ್ನು ಬಂಧಿಸಬೇಕಾದ ಪೊಲೀಸ್ ಇಲಾಖೆ ಕೇವಲ ನೊಟೀಸ್ ಜಾರಿ ಮಾಡಿ ಅವರ ಕೆಲಸದಿಂದ ಕೈ ತೊಳೆದುಕೊಂಡಿದ್ದಾರೆ ಇದರಿಂದ ಸಂಘಪರಿವಾರದ ದುಷ್ಕೃತ್ಯವನ್ನು ನಿಲ್ಲಿಸಲು ಸಾಧ್ಯವಿಲ್ಲ.
ಕಮಿಷನರ್ ವ್ಯಾಪ್ತಿಯಲ್ಲಿ ಮತ್ತು ಜಿಲ್ಲೆಯ ಹಲವು ಕಡೆಗಳಲ್ಲಿ ಸಂಘಪರಿವಾರ ಪಥಸಂಚಲನ ನಡೆಸಿ ಉದ್ರೇಕಕಾರಿ ಭಾಷಣ ಮಾಡಲು ಮತ್ತು ಫೆಬ್ರವರಿ 24 ರಂದು ಮಂಗಳೂರಿನಲ್ಲಿ ಪ್ರತಿಭಟನಾ ಜಾಥ ನಡೆಸಲು ಅನುಮತಿ ಕೊಡುವ ಪೊಲೀಸ್ ಇಲಾಖೆ, ಇನ್ನಿತರರು ಕಾರ್ಯಕ್ರಮ ನಡೆಸುವಾಗ ಅನುಮತಿಯನ್ನು ಕೊಡದೆ ಜಿಲ್ಲಾದ್ಯಂತ ನಿಷೇಧಾಜ್ಞೆಗೆ ಕರೆಕೊಟ್ಟು ತಾರತಮ್ಯವನ್ನು ನಡೆಸುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ಷಡ್ಯಂತ್ರಗಳು ಕೂಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ನಡೆಯುತ್ತಿದೆ.
ಈ ರೀತಿಯ ಘಟನೆಗಳು ನಡೆಯುತ್ತಿರುವಾಗಲೂ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮೌನ ವಹಿಸಿರುವುದು ಎಲ್ಲರಿಗೂ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಆದುದರಿಂದ ತಕ್ಷಣ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಂದ್ ನಡೆಸಿ ಅಶಾಂತಿ ಸೃಷ್ಟಿಸುವವರ ಮೇಲೆ ಕಠಿಣ ಕಾನೂನು ಕ್ರಮ ಜರಗಿಸಿ ಬಂಧಿಸಬೇಕೆಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್‌ಖಾನ್ ಕೊಡಾಜೆ, ಕಾರ್ಯದರ್ಶಿಇಕ್ಬಾಲ್ ಬೆಳ್ಳಾರೆ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.