ಸಂಘಪರಿವಾರಕ್ಕೆ ಸೌಹಾರ್ದತೆ ಬೇಕಾಗಿಲ್ಲ: ನರಸಿಂಹ
ಕುಂದಾಪುರ, ಫೆ.24: ಗೋಸಾಗಾಟ, ವಸ್ತ್ರಸಂಹಿತೆ, ಧರ್ಮ ರಕ್ಷಣೆ ಬಗ್ಗೆ ಯುವಕರಲ್ಲಿ ಕೋಮು ವಿಷಬೀಜ ಬಿತ್ತಿ ಅವರನ್ನು ದಾರಿ ತಪ್ಪಿಸುವ ಕೆಲಸ ವನ್ನು ಸಂಘಪರಿವಾರ ಮಾಡುತ್ತಿದೆ. ಸಂಘಪರಿವಾರಕ್ಕೆ ಸೌಹಾರ್ದದ ಅಗತ್ಯ ಇಲ್ಲ. ಇವರ ಗೂಂಡಾಗಿರಿಗೆ ಹೆದರದೆ ಐಕ್ಯತಾ ರ‍್ಯಾಲಿಯನ್ನು ಯಶಸ್ವಿಗೊಳಿ ಸಲಿದ್ದೇವೆ ಎಂದು ಸಿಪಿಐಎಂ ಕುಂದಾಪುರ ವಲಯ ಕಾರ್ಯದರ್ಶಿ ಎಚ್. ನರಸಿಂಹ ಹೇಳಿದ್ದಾರೆ.
ಐಕ್ಯತಾ ರ‍್ಯಾಲಿ ವಿರೋಧಿಸಿ ಸಂಘಪರಿವಾರ ಫೆ.25ರಂದು ಕರೆ ನೀಡಿರುವ ಹರತಾಳ ಹಾಗೂ ಸಿಪಿಐಎಂ ಉಳ್ಳಾಲ ಕಚೇರಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಕುಂದಾಪುರ ಹಾಗೂ ಬೈಂದೂರು ವಲಯ ಸಮಿತಿ ಶುಕ್ರವಾರ ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ನಡೆಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿರುವ ಪಿಣರಾಯಿ ವಿಜಯನ್ ಪಾಕಿಸ್ತಾನದಿಂದ ಬರುತ್ತಿಲ್ಲ. ಇವರು ಮಂಗಳೂರಿಗೆ ಆಗಮಿಸುವುದು ಬೇಡ ಎಂದು ಹೇಳುವ ಅಧಿಕಾರ ಇವರಿಗೆ ಕೊಟ್ಟವರ್ಯಾರು. ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪರಿವಾರದ ಗೂಂಡಾ ನಾಯಕರುಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಿಪಿಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕಮ್ಯೂನಿಸ್ಟರ ಬಗ್ಗೆ ಹಿಂದೂ ಸಂಘಟನೆಯ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೂ ಸಂಘಟನೆಯ ನಾಯಕರಿಗೆ ಅಂಬೇಡ್ಕರ್ ಬರೆದಿರುವ ಸಂವಿಧಾನದ ಮೇಲೆ ನಂಬಿಕೆ ಇದಿದ್ದರೆ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಸಂವಿಧಾನದ ವಿರುದ್ದವಾಗಿ ಕೆಲಸ ಮಾಡುವ ಸಂಘಪರಿವಾರದ ನಾಯಕರುಗಳು ನಿಜವಾದ ದೇಶದ್ರೋಹಿಗಳು ಎಂದು ಆರೋಪಿಸಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಶಂಕರ್, ಮುಖಂಡ ರಾದ ದಾಸ ಭಂಡಾರಿ, ಅಶೋಕ್ ಹಟ್ಟಿಯಂಗಡಿ, ಸಂತೋಷ ಹೆಮ್ಮಾಡಿ, ರಾಜಾ ಬಿಟಿಆರ್, ಗಣೇಶ್ ಕಲ್ಲಾಗರ, ಮಂಜುನಾಥ ಶೋಗನ್, ರಾಜೇಶ ವಡೇರಹೋಬಳಿ, ರವಿ ವಿ.ಎಂ. ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಡಿವೈಎಫ್‌ಐ ಬೆಟ್ಟಾಗರ ಕಚೇರಿಯಿಂದ ಹೊರಟ ಬೈಕ್ ರ್ಯಾಲಿಗೆ ಕೆ.ಶಂಕರ್ ಚಾಲನೆ ನೀಡಿದರು.