×
Ad

ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಶೋಭಾ ಕರಂದ್ಲಾಜೆ

Update: 2017-02-24 19:29 IST

ಮಂಗಳೂರು, ಫೆ.24: ಕಪ್ಪಕಾಣಿಕೆಯ ವಿಚಾರ ಡೈರಿಯಲ್ಲಿ ಬಹಿರಂಗಗೊಂಡಿರುವುದರಿಂದ ಮುಖ್ಯಮಂತ್ರಿಯ ಸಿದ್ದರಾಮಯ್ಯರ ಮುಖವಾಡ ಕಳಚಿ ಬಿದ್ದಿದೆ. ಹಾಗಾಗಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೈರಿಯಲ್ಲಿ ಹೆಸರು ನಮೂದಾಗಿರುವ ಸಚಿವರುಗಳ ರಾಜೀನಾಮೆ ಪಡೆಯಬೇಕು. ರಾಜ್ಯದಲ್ಲಿ ಮುಖ್ಯಮಂತ್ರಿಯ ನೇತೃತ್ವದಲ್ಲೇ ಸಾಮೂಹಿಕ ಭ್ರಷ್ಟಚಾರ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬರಗಾಲವಿದೆ. ಅದನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಾರ್ಯ ಮಾಡುವ ಬದಲು ಸರಕಾರ ಭ್ರಷ್ಟಚಾರದಲ್ಲಿ ತೊಡಗಿದೆ. ಮುಖ್ಯಮಂತ್ರಿ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಸಲ್ಲಿಸಿ ತನ್ನ ಕುರ್ಚಿ ಭದ್ರಪಡಿಸಿಕೊಂಡಿದ್ದಾರೆ ಎಂದ ಕರಂದ್ಲಾಜೆ, ಬೆಂಗಳೂರಿನ ಉಕ್ಕಿನ ಸೇತುವೆಗೆ ಇನ್ನೂ ಟೆಂಡರ್ ಆಗಿಲ್ಲ. ಆದರೆ ಈ ಯೋಜನೆಯಿಂದ ಹಣ ಲೂಟಿ ಮಾಡಲಾಗಿದೆ. 1,200 ಕೋ.ರೂ. ವೆಚ್ಚದ ಉಕ್ಕಿನ ಸೇತುವೆಯ ಯೋಜನಾ ವೆಚ್ಚವನ್ನು 1,800 ಕೋ.ರೂ.ಗೆ ಏರಿಸಿ 600 ಕೋ.ರೂ. ನುಂಗಲಾಗುತ್ತಿದೆ ಎಂದರು.

 ಎತ್ತಿನಹೊಳೆ ಯೋಜನೆಗೆ ಬಿಜೆಪಿಯ ವಿರೋಧವಿದೆ. ನೀರಿನ ಮೂಲ ಇಲ್ಲ, ಸೇತುವೆಯೂ ಆಗಿಲ್ಲ. ಆದರೆ ಪೈಪ್‌ಲೈನ್ ಖರೀದಿಸಲಾಗಿದೆ. ಇದರಲ್ಲಿ ಗಳಿಸಿದ ಹಣವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ರವಾನೆ ಮಾಡಲಾಗಿದೆ. ಗೋವಿಂದರಾಜು ಐಟಿ ಹಾಗೂ ಇಡಿ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ, ನನ್ನ ಮನೆಗೆ ದಾಳಿ ನಡೆಸಿರುವ ದಾಖಲೆ ಸೋರಿಕೆಯಾದ ಬಗ್ಗೆ ಪ್ರಶ್ನಿಸಿದ್ದಾರೆ. ಆ ಮೂಲಕ ದಾಳಿ ನಡೆದಿರುವುದನ್ನು ಅವರು ಒಪ್ಪಿಕೊಂಡಂತಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೆ.25ರಂದು ಮಂಗಳೂರಿಗೆ ಬರುತ್ತಿದ್ದಾರೆ. ಇದನ್ನು ವಿರೋಧಿಸಿ ಸಂಘ ಪರಿವಾರ ಹರತಾಳಕ್ಕೆ ಕರೆ ನೀಡಿದೆ. ಈ ವೇಳೆ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯ ಸರಕಾರವೇ ಹೊಣೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಮಾಜಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಬ್ರಿಜೇಶ್ ಚೌಟ, ಜಿತೇಂದ್ರ ಕೊಟ್ಟಾರಿ, ಕಿಶೋರ್ ರೈ ಸುದರ್ಶನ ಮೂಡುಬಿದಿರೆ, ಗೀತಾಂಜಲಿ ಸುವರ್ಣ, ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News