ಅಸೈ ಮದಕ: ಜಮಾಅತೆ ಇಸ್ಲಾಮಿಯಿಂದ ಸಾರ್ವಜನಿಕರಿಗೆ ಬಾವಿ ಲೋಕಾರ್ಪಣೆ
ಮಂಗಳೂರು, ಫೆ.24: ದೇರಳಕಟ್ಟೆ ಸಮೀಪದ ಅಸೈ ಮದಕದಲ್ಲಿ ನೀರಿಗಾಗಿ ಹಪಹಪಿಸುತ್ತಿದ್ದ ಹಲವು ಕುಟುಂಬಗಳಿಗೆ ಸಮಾಜ ಸೇವಾ ಘಟಕ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ವತಿಯಿಂದ ದಾನಿಗಳ ಸಹಕಾರದೊಂದಿಗೆ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಬಾವಿಯನ್ನು ನಿರ್ಮಿಸಿ ಕೊಡಲಾಯಿತು.
ಸುಮಾರು 70 ಅಡಿ ಆಳವಿರುವ ಬಾವಿಯನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರ ಬಳಕೆಗೆ ಶುಕ್ರವಾರ ಉದ್ಘಾಟಿಸಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಉಪಾಧ್ಯಕ್ಷ ಅಬ್ದುರ್ರಹೀಂ ಉಳ್ಳಾಲ ಉದ್ಘಾಟಿಸಿ ಮಾತನಾಡಿ, ಈ ಬಾವಿಯ ನೀರು ಎಲ್ಲ ಜಾತಿ, ಮತ, ಧರ್ಮದ ಜನರಿಗೆ ಸೇರಿದ್ದಾಗಿದ್ದು, ಸರ್ವರೂ ಇದರ ಪ್ರಯೋಜನ ಪಡೆಯಬೇಕು. ಒಂದು ಹನಿ ನೀರಿಗೂ ಇಂದು ಹಾಹಾಕಾರ ಉಂಟಾಗುತ್ತಿದೆ. ನೀರು ಅತ್ಯಮೂಲ್ಯ ಸಂಪತ್ತಾಗಿದ್ದು, ಅದು ಪೋಲಾಗದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಮಾಅತೆ ಇಸ್ಲಾಮೀ ಹಿಂದ್ ನ ಸೇವೆಯು ಸಕಲ ಧರ್ಮೀಯರಿಗಾಗಿದ್ದು, ಎಲ್ಲಾ ಮನುಷ್ಯರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.
ಉದ್ಯಮಿ ಇಸ್ಹಾಕ್ ಫರಂಗಿಪೇಟೆ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಉಪಾಧ್ಯಕ್ಷ ಅಬ್ದುಲ್ ಗಫೂರ್ ಕುಳಾಯಿ, ಸಮಾಜ ಸೇವಾ ಘಟಕದ ಸಿದ್ದೀಕ್ ಜಕ್ರಿಬೆಟ್ಟು, ಶಂಶೀರ್ ಮೆಲ್ಕಾರ್, ಮಕ್ಬೂಲ್ ಕುದ್ರೋಳಿ, ಅಬ್ದುಸ್ಸಲಾಂ ಸಿ.ಎಚ್, ಇರ್ಷಾದ್ ಹಾಶ್ಮಿ, ಅಬ್ದುಲ್ಲತೀಫ್ ಕೆ.ಕೆ. ಮತ್ತಿತರರು ಉಪಸ್ಥಿತರಿದ್ದರು.