ಅಂತಿಮ ತೀರ್ಮಾನದವರೆಗೆ ಟೋಲ್ ಶುಲ್ಕ ಇಲ್ಲ: ರಾ.ಹೆದ್ದಾರಿ ಜಾಗೃತಿ ಸಮಿತಿ ನಿರ್ಧಾರ
ಉಡುಪಿ, ಫೆ.24: ರಾಜ್ಯ ಮುಖ್ಯ ಕಾರ್ಯದರ್ಶಿಯವರು ಸಭೆ ಕರೆದು ಕರಾವಳಿ ಜಿಲ್ಲೆಗಳ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹದ ಕುರಿತಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ಜಿಲ್ಲೆಯ ಯಾವುದೇ ಖಾಸಗಿ ವಾಹನಗಳಿಂದ ಟೋಲನ್ನು ಸಂಗ್ರಹಿಸಬಾರದು ಎಂದು ಉಡುಪಿ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ತಿಳಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಅವರು, ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ಹಾಗೂ ಅವೈಜ್ಞಾನಿಕ ಕಾಮಗಾರಿ, ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಉಡುಪಿ ಜಿಲ್ಲಾ ವಾಹನಗಳಿಗೆ ಟೋಲ್‌ಶುಲ್ಕ ವಿನಾಯಿತಿಗಾಗಿ ರಾ.ಹೆದ್ದಾರಿ ಜಾಗನತಿ ಸಮಿತಿಯ ಮೂಲಕ ಈಗಾಗಲೇ ನ್ಯಾಯಯುತ ಹೋರಾಟ ನಡೆಸಿದ್ದೇವೆ ಎಂದರು.
ಕಳೆದ ಫೆ.13ರಂದು ಈ ಸಂಬಂಧ ನಡೆದ ಉಡುಪಿ ಜಿಲ್ಲಾ ಬಂದ್ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರ ವಿಶೇಷ ತಹಶೀಲ್ದಾರ್‌ರು ನಮ್ಮ ಬೇಡಿಕೆಗಳನ್ನು ಆಲಿಸಿ, ಫೆ.25ರವರೆಗೆ ಟೋಲ್ ವಿನಾಯಿತಿ ನೀಡಲಾಗು ವುದು ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಮುತುವರ್ಜಿ ವಹಿಸಲು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದರು.
ಇದೀಗ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಜಿಲ್ಲಾಧಿಕಾರಿ ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ, ರಾಜ್ಯ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವ ವರೆಗೆ ಯಾವುದೇ ರೀತಿಯಲ್ಲಿ ಟೋಲ್ ಶುಲ್ಕ ಸಂಗ್ರಹಿಸಬಾರದು ಎಂದು ನವಯುಗ ಕಂಪೆನಿಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸ್ಪಷ್ಟ ಸೂಚನೆ ನೀಡಿದ್ದರು ಎಂದವರು ಹೇಳಿದರು.
ಹೀಗಾಗಿ ಬೆಂಗಳೂರಿನ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವವರೆಗೂ ಟೋಲ್‌ನ್ನು ಜಿಲ್ಲೆಯ ವಾಹನಗಳಿಂದ ಸಂಗ್ರಹಿಸಬಾರದು ಹಾಗೂ ಯಾವುದೇ ಸ್ಥಳೀಯ ಖಾಸಗಿ ವಾಹನ ಮಾಲಕರು ಟೋಲ್‌ನ್ನು ನೀಡಬಾರದು ಎಂದು ಪ್ರತಾಪ್ ಶೆಟ್ಟಿ ನುಡಿದರು.
ಸಮಿತಿಯ ಬೇಡಿಕೆಗಳೇನು ಎಂದು ಪ್ರಶ್ನಿಸಿದಾಗ, ಎಲ್ಲಾ ಕಡೆಗಳಲ್ಲಿ ಸರ್ವಿಸ್ ರಸ್ತೆಗಳ ನಿರ್ಮಾಣ, ಸರಿಯಾದ ಒಳಚರಂಡಿ ವ್ಯವಸ್ಥೆ, ಅಲ್ಲಲ್ಲಿ ಬಸ್‌ನಿಲ್ದಾಣಗಳ ರಚನೆ, ದಾರಿ ದೀಪಗಳ ವ್ಯವಸ್ಥೆ ಕಲ್ಪಿಸುವುದು ಹಾಗೂ ಸ್ಥಳೀಯ ವಾಹನಗಳಿಗೆ (ಕೆಎ-20) ಟೋಲ್ ಶುಲ್ಕದಿಂದ ವಿನಾಯಿತಿ ನಮ್ಮ ಪ್ರಮುಖ ಬೇಡಿಕೆಗಳು ಎಂದರು.
ಫೆ.25ರ ಬಳಿಕ ಕಂಪೆನಿ ಮತ್ತೆ ಟೋಲ್ ಸಂಗ್ರಹಕ್ಕೆ ಮುಂದಾದರೆ ನಾವು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ವಿಠಲ ಪೂಜಾರಿ, ಐರೋಡಿ ಗ್ರಾಪಂ ಅಧ್ಯಕ್ಷ ಮೋಸೆಸ್ ರಾಡ್ರಿಗಸ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ಅಚ್ಚುತ ಪೂಜಾರಿ, ಆಲ್ವಿನ್ ಅಂದ್ರಾದೆ ಉಪಸ್ಥಿತರಿದ್ದರು.