ಅನಧಿಕೃತ ವಿದ್ಯುತ್ ತಂತಿಗೆ ಗರ್ಭಿಣಿ ಜಿಂಕೆ ಬಲಿ: ಆರೋಪಿ ವಶಕ್ಕೆ
ಮುಂಡಗೋಡ, ಫೆ.24: ಅನಧಿಕೃತ ವಿದ್ಯುತ್ ತಂತಿಗೆ ಗರ್ಭಿಣಿ ಜಿಂಕೆಯೊಂದು ಬಲಿಯಾದ ಘಟನೆ ತಾಲೂಕಿನ ಅತ್ತಿವೇರಿ ಗ್ರಾಮದ ಗೌಳಿದಡ್ಡಿ ಹತ್ತಿರ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಅನಧಿಕೃತ ವಿದ್ಯುತ್ ಬಳಸಿದ ಗೌಳಿ ದಡ್ಡಿಯ ಅಂಬೋಜಿ ಜನ್ನು ಬೋಡಕರೆ(72) ಎಂದು ಹೇಳಲಾಗಿದೆ.
ಅಂಬೋಜಿ ತನ್ನ ಹೊಲದ ಸರ್ವೇ ನಂ 62ರಲ್ಲಿ 2 ಎಕರೆ ಹೊಲದಲ್ಲಿ ಮೆಕ್ಕೆಜೋಳ ಬೆಳೆದ್ದಿದ್ದ. ಅದನ್ನು ರಕ್ಷೀಸಲು ಅನಧಿಕೃತವಾಗಿ ವಿದ್ಯುತನ್ನು ತನ್ನ ತಂತಿ ಬೇಲಿಗೆ ಹರಿಬಿಟ್ಟಿದ್ದ ಎನ್ನಲಾಗಿದೆ. ಆಹಾರ ಅರಸಲು ಬಂದ ಸುಮಾರು 3 ವರ್ಷದ ಜಿಂಕೆ ಹೊಲಕ್ಕೆ ಹೋಗಲು ಹೋಗಿ ವಿದ್ಯುತ್ ತಾಗಿಸಿಕೊಂಡು ಮೃತಪಟ್ಟಿದೆ ಎಂದು ಹೇಳಲಾಗಿದೆ.
ಶುಕ್ರವಾರ ಮುಂಜಾನೆ ಎಂದಿನಂತೆ ಹೊಲಕ್ಕೆ ಬಂದ ಅಂಬೋಜಿ ನಾಯಿಗಳು ಜಿಂಕೆಯನ್ನು ಹರಿದು ತಿನ್ನಲು ಮುಂದಾಗಿದ್ದವು ಎಂದು ಹೇಳಲಾಗಿದ್ದು ಅಂಬೋಜಿ ನಾಯಿಗಳನ್ನು ಓಡಿಸಿದ್ದಾನೆ.
ಕಾಗೆ ಹದ್ದುಗಳು ಸುತ್ತಾಡುವುದನ್ನು ಕಂಡ ಅರಣ್ಯ ಕಾವಲುಗಾರ ಉಮೇಶ ಕುರ್ತಕೋಟಿ ಆ ಸ್ಥಳಕ್ಕೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಕುರಿತು ಮುಂಡಗೋಡ ಅರಣ್ಯಾಧಿಕಾರಿಗಳು ಪ್ರಕರಣ ಆರೋಪಿ ಅಂಬೋಜಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.