ಐಸಿಸ್‌ನಿಂದ ಮೊಸುಲ್ ವಿಮಾನ ನಿಲ್ದಾಣ ವಶಪಡಿಸಿಕೊಂಡ ಸೇನೆ

Update: 2017-02-24 15:21 GMT

ಮೊಸುಲ್ (ಇರಾಕ್), ಫೆ. 24: ಅಮೆರಿಕ ಬೆಂಬಲಿತ ಇರಾಕ್ ಪಡೆಗಳು ಗುರುವಾರ ಮೊಸುಲ್ ವಿಮಾನ ನಿಲ್ದಾಣವನ್ನು ಐಸಿಸ್ ಭಯೋತ್ಪಾದಕರಿಂದ ವಶಪಡಿಸಿಕೊಂಡಿವೆ. ಮೊಸುಲ್ ನಗರದ ಪಶ್ಚಿಮದಲ್ಲಿ ಭಯೋತ್ಪಾದಕರ ಪ್ರಮುಖ ಭದ್ರನೆಲೆಯಾಗಿದ್ದ ವಿಮಾನ ನಿಲ್ದಾಣವನ್ನು ವಶಪಡಿಸಿಕೊಳ್ಳುವುದಕ್ಕಾಗಿ ಸೇನೆಯು ಹಲವು ಕಡೆಗಳಿಂದ ನುಗ್ಗಿ ಬಂದಿತ್ತು.

ಇರಾಕ್‌ನ ಎರಡನೆ ಅತಿ ದೊಡ್ಡ ನಗರ ಮೊಸುಲ್‌ನ ದಕ್ಷಿಣ ಭಾಗದ ಪ್ರದೇಶಗಳಲ್ಲಿ ಸೈನಿಕರು ಈಗಾಗಲೇ ನೆಲೆಯೂರಿದ್ದಾರೆ.

ಉನ್ನತ ದರ್ಜೆಯ ಭಯೋತ್ಪಾದನೆ ನಿಗ್ರಹ ಪಡೆಗಳು ಗುರುವಾರ ನೈರುತ್ಯ ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಘೋಝ್ಲನಿ ಸೇನಾ ನೆಲೆಯನ್ನು ಪ್ರವೇಶಿಸಿದವು. ಬಳಿಕ ಪಡೆಗಳು ಅಲ್ಲಿಂದ ಇತರ ಜಿಲ್ಲೆಗಳತ್ತ ಮುನ್ನುಗ್ಗುತ್ತಿವೆ.

ಐಸಿಸ್ ಉಗ್ರರು ಆತ್ಮಹತ್ಯಾ ಕಾರ್ ಬಾಂಬ್‌ಗಳು, ಗ್ರೆನೇಡ್‌ಗಳು ಮತ್ತು ಮೋರ್ಟರ್‌ಗಳನ್ನು ಹೊತ್ತ ಡ್ರೋನ್‌ಗಳನ್ನು ಬಳಸಿ ಪ್ರತಿ ಹೋರಾಟ ನೀಡುತ್ತಿದ್ದಾರೆ ಎಂದು ಸ್ಥಳದಲ್ಲಿರುವ ‘ರಾಯ್ಟರ್ಸ್’ ವರದಿಗಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News