×
Ad

ಉಡುಪಿ: ಮೀನುಗಾರರ ಡೀಸೆಲ್ ಸಬ್ಸಿಡಿ 120 ಕೋಟಿ ರೂ.ಬಿಡುಗಡೆ

Update: 2017-02-24 20:55 IST

ಉಡುಪಿ, ಫೆ.24: ಮೀನುಗಾರಿಕೆ ದೋಣಿಗಳಿಗೆ 'ಡೀಸೆಲ್ ಮಾರಾಟ ತೆರಿಗೆ ಮರುಪಾವತಿ' ಎಂಬ ಯೋಜನೆಯಡಿ ಯಾಂತ್ರೀಕೃತ ದೋಣಿಗಳು ಮೀನುಗಾರಿಕೆಗೆ ಬಳಸಿದ ಡೀಸೆಲ್ ಮೇಲಿನ ಮಾರಾಟ ಕರಕ್ಕೆ ಸಮಾನವಾದ ಮೊತ್ತವನ್ನು ಸಹಾಯಧನವಾಗಿ ದೋಣಿ ಮಾಲಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. ಈವರೆಗೆ ರಾಜ್ಯ ಸರಕಾರ ಡೀಸೆಲ್ ಸಬ್ಸಿಡಿಗಾಗಿ ಒಟ್ಟು 120 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ರಾಜ್ಯ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇವುಗಳಲ್ಲಿ 71.83 ಕೋಟಿ ರೂ.ಗಳನ್ನು ಈಗಾಗಲೇ ನೇರವಾಗಿ ಮೀನುಗಾರರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. 23.63 ಕೋಟಿ ರೂ.ಗಳನ್ನು ನವೆಂಬರ್ ಕೊನೆಯವರೆಗಿನ ಸಹಾಯಧನವನ್ನು ವರ್ಗಾಯಿಸಲು ಖಜಾನೆಗೆ ಬಿಲ್‌ಗಳನ್ನು ಸಲ್ಲಿಸಲಾಗಿದೆ. ಬಾಕಿ ಮೊತ್ತ ಪಾವತಿಸಲು 20 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಸರಕಾರ ಈಗಾಗಲೇ ಬಿಡುಗಡೆಗೊಳಿಸಿದೆ ಎಂದು ಪ್ರಮೋದ್ ತಿಳಿಸಿದರು.

 2016-17ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್ ಅಂತ್ಯದವರೆಗೆ 1547 ಯಾಂತ್ರೀಕೃತ ದೋಣಿಗಳಿಗೆ 47.83ಕೋಟಿರೂ.ಗಳ ಸಬ್ಸಿಡಿ ಮೊತ್ತವನ್ನು ದೋಣಿ ಮಾಲಕರ ನೇರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೆ ನವೆಂಬರ್‌ನಿಂದ ಜನವರಿವರೆಗೆ 1513 ಯಾಂತ್ರೀಕೃತ ದೋಣಿಗಳಿಗೆ ರೂ.23.66 ಕೋಟಿ ಸಹಾಯಧನವನ್ನು ದೋಣಿ ಮಾಲಕರಿಗೆ ನೀಡುವಂತೆ ಪ್ರಸ್ತಾವನೆಯನ್ನು ಮೀನುಗಾರಿಕೆ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ ಎಂದರು.

ಮೀನುಗಾರರಿಗೆ ಸಂಕಷ್ಟ ಪರಿಹಾರ ನಿಧಿಯಿಂದ ನೀಡಲಾಗುತಿದ್ದ ಪರಿಹಾರ ಧನವನ್ನು 2ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲಾಗಿದೆ. ಈ ಯೋಜನೆಯಡಿ ಈ ಸಾಲಿನಲ್ಲಿ ಇಲ್ಲಿಯವರೆಗೆ 74 ಪ್ರಕರಣ ಇತ್ಯರ್ಥಗೊಳಿಸಿ 131.78 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ ಎಂದರು.

ರಾಷ್ಟೀಕೃತ ಬ್ಯಾಂಕ್‌ಗಳು ಶೇ.3 ಹಾಗೂ 2ರ ಬಡ್ಡಿ ದರದಲ್ಲಿ ಮೀನುಗಾರ/ಮೀನುಗಾರ ಮಹಿಳೆಯರ ಗುಂಪಿಗೆ ನೀಡುವ 50,000 ರೂ. ಸಾಲಕ್ಕೆ ಮೀನುಗಾರಿಕೆ ಇಲಾಖೆಯಿಂದ ಬಡ್ಡಿ ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯಡಿ ಉಡುಪಿ ಜಿಲ್ಲೆಗೆ 27785 ಫಲಾನುವಿಗಳಿಗೆ ಒಟ್ಟು ಹೆಚ್ಚಿನ ಬಡ್ಡಿ ವ್ಯತ್ಯಾಸದ ಸಹಾಯಧನ 13.51 ಕೋಟಿ ರೂ. ಮಂಜೂರಾಗಿದೆ ಎಂದು ಪ್ರಮೋದ್ ತಿಳಿಸಿದರು.

ಡೀಸೆಲ್ ಸಬ್ಸಿಡಿಯಲ್ಲಿ  ಕರ್ನಾಟಕ ಅಗ್ರ: 

ಪಶ್ಚಿಮ ಕರಾವಳಿಯ ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸರಕಾರ ಅತ್ಯಧಿಕ ಡೀಸೆಲ್ ಸಬ್ಸಿಡಿಯನ್ನು ರಾಜ್ಯದ ಯಾಂತ್ರೀಕೃತ ದೋಣಿಗಳ ಮೀನುಗಾರರಿಗೆ ನೀಡುತ್ತಿದೆ ಎಂದು ಪ್ರಮೋದ್ ವಿವರಿಸಿದರು.

ಮಹಾರಾಷ್ಟ್ರದಲ್ಲಿ 10,000 ದೋಣಿಗಳಿಗೆ ಡೀಸೆಲ್ ಸಬ್ಸಿಡಿ ಲಭ್ಯವಿದ್ದು, ವರ್ಷಕ್ಕೆ 45,000 ಲೀಟರ್‌ನ್ನು ಪ್ರತಿ ಬೋಟ್‌ಗೆ ಬಿಡುಗಡೆಗೊಳಿಸುತ್ತಿದೆ. ಇದಕ್ಕಾಗಿ ಸರಕಾರ 100 ಕೋಟಿ ರೂ. ಅನುದಾನ ನೀಡಿದೆ. ಗುಜರಾತ್‌ನಲ್ಲಿ 7,700 ಯಾಂತ್ರೀಕೃತ ದೋಣಿಗಳಿಗೆ ಸಬ್ಸಿಡಿ ಇದ್ದು ವರ್ಷಕ್ಕೆ 24,000ಲೀ. ಲಭ್ಯವಿದೆ. ಸರಕಾರ 80 ಕೋಟಿ ರೂ.ಬಿಡುಗಡೆಗೊಳಿಸಿದೆ. ಗೋವಾದಲ್ಲಿ 900 ದೋಣಿಗಳಿಗೆ ಸೌಲಭ್ಯವಿದ್ದು ವರ್ಷಕ್ಕೆ 30,000ಲೀ. ಡೀಸೆಲ್ 25 ಕೋಟಿ ರೂ.ಅನುದಾನ ಬಿಡುಗಡೆಯಾಗುತ್ತಿದೆ.

ಕರ್ನಾಟಕದಲ್ಲಿ 3,600 ಯಾಂತ್ರೀಕೃತ ದೋಣಿಗಳಿಗೆ ಸಬ್ಸಿಡಿ ಇದ್ದು, ವರ್ಷಕ್ಕೆ ಪ್ರತಿ ದೋಣಿಗೆ 90,000ಲೀ. ಸಿಗುತ್ತಿದೆ. ಸರಕಾರ ಇದಕ್ಕಾಗಿ 115.52 ಕೋಟಿ ರೂ.ನ್ನು ಬಜೆಟ್‌ನಲ್ಲಿ ನೀಡಿದೆ ಎಂದು ಪ್ರಮೋದ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News