ಸಂಘಪರಿವಾರದ ಅಪ್ರಜಾಸತ್ತಾತ್ಮಕ ನಡವಳಿಕೆಗೆ ಸರಕಾರಿ ಆಡಳಿತವೇ ಹೊಣೆ: ಜಿ.ರಾಜಶೇಖರ್
ಉಡುಪಿ, ಫೆ.24: ಮಂಗಳೂರಿನ ಪೊಲೀಸರು ಬಜರಂಗದಳದ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಮಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಕರಾಳ ಬೆಳವಣಿಗೆಗೆ ಅಲ್ಲಿ ಸರಕಾರಿ ಆಡಳಿತವೇ ನೇರ ಜವಾಬ್ದಾರಿ. ಸರಕಾರಿ ವ್ಯವಸ್ಥೆ ಸರಿಯಾಗಿರುತ್ತಿದ್ದರೆ ಸಂಘ ಪರಿವಾರದ ಅಪ್ರಜಾಸತ್ತಾತ್ಮಕ ನಡವಳಿಕೆಯನ್ನು ನಿಲ್ಲಿಸಬಹುದು ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಟೀಕಿಸಿದ್ದಾರೆ.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯಮಟ್ಟದ ಯುವ ಜಾಗೃತಿ -ದೇಶ ಸಮೃದ್ಧಿ ಅಭಿಯಾನದ ಅಂಗವಾಗಿ ಶುಕ್ರವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಹಮ್ಮಿಕೊಳ್ಳಲಾದ ಬೈಕ್ ರ‍್ಯಾಲಿಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ನಮ್ಮ ದೇಶದಲ್ಲಿ ಯಾವುದೇ ಜಾತ್ಯತೀತ ಅಥವಾ ಕೋಮುವಾದಿ ಸರಕಾರ ಇದ್ದರೂ ಇಲ್ಲಿನ ಮುಸ್ಲಿಮರಿಗೆ, ದಲಿತರಿಗೆ ಅದರಿಂದ ಯಾವುದೇ ಪ್ರಯೋಜನ ಇಲ್ಲ. ಈ ಸರಕಾರಗಳಿಂದ ಅವರ ಜೀವನ ಆಯ್ಕೆ ಹಾಗೂ ಉದ್ಯೋಗ ಅವಕಾಶಗಳಲ್ಲಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ಈಗ ಆ ಸ್ಥಿತಿ ಇಲ್ಲಿನ ಬಹುಸಂಖ್ಯಾತ ಹಿಂದುಗಳಿಗೂ ಬರುತ್ತಿದೆ ಎಂದರು.
ಇಂದಿನ ಹೊಸ ಆರ್ಥಿಕ ಧೋರಣೆಯ ಯುಗದಲ್ಲಿ ಎಲ್ಲ ಸರಕಾರಗಳು ಅನುಸರಿಸುವ ಧೋರಣೆ ಒಂದೇ ಆಗಿದೆ. ಅದಾನಿ, ಅಂಬಾನಿಯರನ್ನು ಎತ್ತಿಹಿಡಿಯುವ ಹಾಗೂ ಬಡವರನ್ನು ಸಂಕಷ್ಟಕ್ಕೆ ದೂಡುವ ಧೋರಣೆ ಇವರದ್ದಾಗಿದೆ. ಹೀಗಾಗಿ ಇಲ್ಲಿನ ಜನರಿಗೆ ಆಯ್ಕೆಗಳೇ ಇಲ್ಲವಾಗಿವೆ. ಇದು ಪ್ರಜಾಪ್ರಭುತ್ವದ ದೊಡ್ಡ ಅಣಕ ಹಾಗೂ ಮೋಸ ಎಂದು ಅವರು ದೂರಿದರು.
ಈ ದೇಶವನ್ನು ಆಳುವ ಬಿಜೆಪಿಗೆ ಸಂವಿಧಾನ, ಕಾನೂನು ಹಾಗೂ ಪ್ರಜಾಪ್ರಭುತ್ವ ದಲ್ಲಿ ನಂಬಿಕೆ ಇಲ್ಲವಾಗಿದೆ. ನಮಗೆ ಭ್ರಮೆಯ ಪ್ರಜಾಪ್ರಭುತ್ವ ಬೇಡ. ವಾಸ್ತವದ ಪ್ರಜಾಪ್ರಭುತ್ವ ಬೇಕು. ಅದಕ್ಕಾಗಿ ಆಯ್ಕೆಯ ಸ್ವಾತಂತ್ರ ನೀಡಬೇಕಾಗಿದೆ ಎಂದು ಅವರು ಒತ್ತಾಯಿಸಿದರು.
ಮುಖ್ಯ ಅತಿಥಿಗಳಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮಾಜಿ ರಾಜ್ಯಾಧ್ಯಕ್ಷ ಅಕ್ವರ್ ಅಲಿ ಉಡುಪಿ, ರಾಜ್ಯ ಕಾರ್ಯದರ್ಶಿ ಅನ್ವರ್ ಅಲಿ ಕಾಪು, ಜಿಲ್ಲಾಧ್ಯಕ್ಷ ಅಝೀಝ್ ಉದ್ಯಾವರ, ಉಪಾಧ್ಯಕ್ಷ ದಿನಕರ ಉಚ್ಚಿಲ, ಯಾಸೀನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಮಲ್ಪೆಯ ಗಾಂಧಿ ಮೈದಾನದಿಂದ ಹೊರಟ ಬೈಕ್ ರ‍್ಯಾಲಿಯು ಕಲ್ಮ್ಮಾಡಿ, ಆದಿಉಡುಪಿ, ಬ್ರಹ್ಮಗಿರಿ, ಜೋಡುಕಟ್ಟೆ, ಕೆ.ಎಂ. ಮಾರ್ಗವಾಗಿ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್‌ನಲ್ಲಿ ಸಮಾಪ್ತಿಗೊಂಡಿತು.