ಜಯಲಲಿತಾರ ಆಸ್ತಿ ದೀಪಾ ಮತ್ತು ನನಗೆ ಸೇರಬೇಕು: ದೀಪಕ್

Update: 2017-02-24 15:37 GMT

ಚೆನ್ನೈ, ಫೆ.24: ಜಯಲಲಿತಾರ ಆಸ್ತಿ ತನಗೆ ಮತ್ತು ತನ್ನ ಸಹೋದರಿಗೆ ಸೇರಬೇಕು ಎಂದು ಜಯಲಲಿತಾರ ಸೋದರಳಿಯ ದೀಪಕ್ ಜಯಕುಮಾರ್ ಹೇಳಿದ್ದಾರೆ. ದೀಪಕ್ ಈ ಹಿಂದೆ ಶಶಿಕಲಾ ಅವರ ಬೆಂಬಲಿಗರಾಗಿದ್ದರು.

  ಚೆನ್ನೈಯ ಪೋಯೆಸ್ ಗಾರ್ಡನ್‌ನಲ್ಲಿರುವ ವೇದ ನಿಲಯಂ ಬಂಗಲೆ ಸೇರಿದಂತೆ ಆಸ್ತಿಗಳನ್ನು ಜಯಲಲಿತಾ ತನ್ನ ಮತ್ತು ತನ್ನ ಸೋದರಿ ದೀಪಾ ಜಯಕುಮಾರ್ ಹೆಸರಿಗೆ ಉಯಿಲು ಬರೆದಿದ್ದಾರೆ ಎಂದು ದೀಪಕ್ ಜಯಕುಮಾರ್ ತಿಳಿಸಿದ್ದಾರೆ.

   ಶಶಿಕಲಾ ಮುಖ್ಯಮಂತ್ರಿಯಾಗುವುದು ರಾಜ್ಯದ ಜನರಿಗೆ ಇಷ್ಟವಿರಲಿಲ್ಲ. ಅಲ್ಲದೆ ಟಿಟಿವಿ ದಿನಕರನ್ ಅವರನ್ನು ಎಐಎಡಿಎಂಕೆಯ ಉಪ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವುದಕ್ಕೆ ಪಕ್ಷದ ಸದಸ್ಯರ ವಿರೋಧವಿತ್ತು . ದಿನಕರನ್ ಮತ್ತು ಎಸ್.ವೆಂಕಟೇಶ್ ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಲೂ ಪಕ್ಷದ ಸದಸ್ಯರು ವಿರೋಧಿಸಿದ್ದರು . ಎಡಿಎಂಕೆಯಲ್ಲಿ ಸ್ಥಾನಮಾನ ಬಯಸಲು ದೀಪಾಗೆ ಅವಕಾಶವಿದೆ. ಆದರೆ ದಿನಕರನ್ ಮತ್ತು ವೆಂಕಟೇಶ್‌ಗೆ ಇಲ್ಲ ಎಂದು ಟಿವಿ ಚಾನೆಲ್ ಜೊತೆಗಿನ ಸಂದರ್ಶನದ ವೇಳೆ ದೀಪಕ್ ತಿಳಿಸಿದರು. ದಿನಕರನ್ ಮತ್ತು ವೆಂಕಟೇಶ್ ಅವರನ್ನು ಜಯಲಲಿತಾ 2011ರಲ್ಲಿ ಪಕ್ಷದಿಂದ ಉಚ್ಛಾಟಿಸಿದ್ದರು.

ಕುಟುಂಬದ ಆಡಳಿತ ತರಲು ಅವರು ಯತ್ನಿಸುತ್ತಿದ್ದಾರೆ. ಬಹುಷಃ ಪಕ್ಷದ ನಿಯಂತ್ರಣವನ್ನು ತಮ್ಮ ಕೈಗೆ ನೀಡಬೇಕೆಂದು ಅವರಿಬ್ಬರೂ ಶಶಿಕಲಾ ಮೇಲೆ ಒತ್ತಡ ಹೇರಿರಬಹುದು . ಆದರೆ ಪಕ್ಷದ ಪದಾಧಿಕಾರಿಗಳೂ ಇದನ್ನು ಒಪ್ಪಲಾರರು . ಹೀಗಾದರೆ ಪಕ್ಷ ಹೋಳಾಗಿ ರಾಜ್ಯದಲ್ಲಿ ಡಿಎಂಕೆ ಸರಕಾರ ರಚಿಸಬಹುದು ಎಂದವರು ಹೇಳಿದರು.

ಮುಖ್ಯಮಂತ್ರಿಯಾಗಿದ್ದ ಒ.ಪನ್ನೀರ್‌ಸೆಲ್ವಂ ಅವರನ್ನು ತಾನು ಗೌರವಿಸುತ್ತೇನೆ ಎಂದ ದೀಪಕ್, ಅವರೋರ್ವ ಉತ್ತಮ ಆಡಳಿತಗಾರ. ಅವರಿನ್ನೂ ಪಕ್ಷದಲ್ಲೇ ಇದ್ದಾರೆ. ಆದ್ದರಿಂದ ಪಕ್ಷದಿಂದ ಉಚ್ಛಾಟನೆ, ಮರಳಿ ಸೇರ್ಪಡೆ ಇತ್ಯಾದಿ ಪ್ರಶ್ನೆಯೇ ಉದ್ಭವಿಸದು. ಇದು ಅವರ (ಪನ್ನೀರ್‌ಸೆಲ್ವಂ) ಪಕ್ಷ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News