ಉಡುಪಿ: ಮಾ.3ರಿಂದ 5ರವರೆಗೆ ರಾಜ್ಯ ಯುವಜನ ಮೇಳ
ಉಡುಪಿ, ಫೆ.24: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ಜಿಲ್ಲಾ ಯುವ ಸಂಘಗಳ ಒಕ್ಕೂಟ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ 2016-17ನೇ ಸಾಲಿನ ರಾಜ್ಯಮಟ್ಟದ ಯುವಜನ ಮೇಳ ಹಾಗೂ ಸ್ವಾಮಿ ವಿವೇಕಾನಂದ ರಾಜ್ಯ ಯುವಪ್ರಶಸ್ತಿ ಪ್ರದಾನ ಸಮಾರಂಭ ಉಡುಪಿಯಲ್ಲಿ ನಡೆಯಲಿದೆ.
ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಈ ವಿಷಯ ತಿಳಿಸಿದರು.
ಕಾರ್ಯಕ್ರಮ ಮಾ.3ರಿಂದ 5ರವರೆಗೆ ಉಡುಪಿ ಒಳಾಂಗಣ ಕ್ರೀಡಾಂಗಣ ಪಕ್ಕದ ಬೃಹತ್ ವೇದಿಕೆ, ಉಡುಪಿ ಪುರಭವನಗಳಲ್ಲಿ ನಡೆಯಲಿದೆ ಎಂದವರು ತಿಳಿಸಿದರು.
ಮಾ.3ರ ಸಂಜೆ 7:00ಗಂಟೆಗೆ ಪ್ರಮೋದ್ ಮಧ್ವರಾಜ್ ಅವರು ಯುವಜನ ಮೇಳವನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ 2015-16ನೇ ಸಾಲಿನ ಸ್ವಾಮೀ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಮಾರಂಭದಲ್ಲಿ ಸಮಾಜ ಸೇವೆ, ಯುವಜನ ಅಭಿವೃದ್ಧಿ, ಕ್ರೀಡಾಭಿವೃದ್ಧಿ ಮುಂತಾದ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಎರಡು ಕ್ರಿಯಾಶೀಲ ಯುವಕ ಮಂಡಲಗಳಿಗೆ ಸಾಂಘಿಕ ಯುವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಾಂಘಿಕ ಪ್ರಶಸ್ತಿ 25,000ರೂ.ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ.
ಇದರೊಂದಿಗೆ ಹತ್ತು ಮಂದಿ ಯುವಕ-ಯುವತಿಯರಿಗೆ ವೈಯಕ್ತಿಕ ರಾಜ್ಯ ಯುವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ವೈಯಕ್ತಿಕ ಪ್ರಶಸ್ತಿ 10,000ರೂ. ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ರಾಜ್ಯದಲ್ಲಿ ಜನಪದ ಕಲೆಯಲ್ಲಿ ಬಹಳಷ್ಟು ಸಾದನೆಗಳನ್ನು ಮಾಡಿರುವ 2017ನೇ ಸಾಲಿನ ಪ್ರತಿಷ್ಠಿತ ಪ್ರದ್ಮಶ್ರೀ ಪ್ರಶಸ್ತಿ ವಿಜೇತ ನಾಡೋಜ ಸುಕ್ರಿ ಬೊಮ್ಮಗೌಡ, ಕರ್ನಾಟಕ ಜನಪದ ವಿವಿಯ ವಿಶ್ರಾಂತ ಕುಲಪತಿ ಡಾ.ಕೆ. ಪ್ರೇಮಕುಮಾರ್ ಹಾಗೂ ಪಳ್ಳಿ ಕಿಶನ್ ಹೆಗ್ಡೆ ಪಾಲ್ಗೊಳ್ಳುವರು.
ಮಾ.4ರಂದು ಬೆಳಗ್ಗೆ 9:00ರಿಂದ ಯುವಜನ ಮೇಳದ ವಿವಿಧ ಸ್ಪರ್ಧೆಗಳು ಅಜ್ಜರಕಾಡು ಪುರಭವನ ಹಾಗೂ ಒಳಾಂಗಣ ಕ್ರೀಡಾಂಗಣದ ಪಕ್ಕದ ವೇದಿಕೆಗಳಲ್ಲಿ ನಡೆಯಲಿವೆ. ವಿಭಾಗದ ಮಟ್ಟದ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ಇದರಲ್ಲಿ ಭಾಗವಹಿಸುತ್ತವೆ.
ಮಾ.5ರ ಸಂಜೆ 4:00ಗಂಟೆಗೆ ಯುವಜನ ಮೇಳದ ಸಮಾರೋಪ ಸಮಾರಂಭ ನಡೆಯಲಿದೆ. ಯುವಜನ ಮೇಳದ ಯಶಸ್ಸಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಉದ್ಘಾಟನೆಗೂ ಮುನ್ನ ವೇದಿಕೆಯಲ್ಲಿ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರಿಂದ 'ಅಂಬಾ ಶಪಥ' ಯಕ್ಷಗಾನ ನಡೆಯಲಿದೆ.