ಕದ್ದ ಬ್ಯಾಟರಿಗಳ ಮಾರಾಟಕ್ಕೆ ಯತ್ನ: ಮೂವರ ಸೆರೆ
ಬೈಂದೂರು, ಫೆ.24: ರಸ್ತೆ ಬದಿ ನಿಲ್ಲಿಸಲಾದ ಲಾರಿಗಳಿಂದ ಬ್ಯಾಟರಿಗಳನ್ನು ಕದ್ದು ಟವೆರಾ ವಾಹನದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಬೈಂದೂರು ಪೊಲೀಸರು ಫೆ.23ರಂದು ಬೆಳಗ್ಗೆ ಒತ್ತಿನೆಣೆ ಹೆನ್ಬೇರು ಕ್ರಾಸ್ ಬಳಿ ಬಂಧಿಸಿದ್ದಾರೆ.
ಬಂಧಿತರನ್ನು ಭಟ್ಕಳ ದೇವಿನಗರದ ಜಾಲಿ ರಸ್ತೆಯ ನಿವಾಸಿ ಮಹಮ್ಮದ್ ಸಲ್ಮಾನ್(21), ಮಹಮ್ಮದ್ ಸಮೀರ್(21), ಭಟ್ಕಳ ತೆಂಗಿನಗುಂಡಿ ರಸ್ತೆಯ ಮಹಮ್ಮದ್ ಮೋಸಿನ್(18) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯಂತೆ ಶಿರೂರುನಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಟವೇರಾ ವಾಹನವನ್ನು ಪರಿಶೀಲಿಸಲು ಪೊಲೀಸರು ಒತ್ತಿನೆಣೆ ಹೆನ್ಬೇರು ಕ್ರಾಸ್ ಬಳಿ ನಿಂತಿದ್ದು, ವಾಹನ ಚಾಲಕ ಕಾರನ್ನು ನಿಲ್ಲಿಸದೆ ಹೆನ್ಬೇರು ಕಡೆಗೆ ತಿರುಗಿಸಿದಾಗ ಕಾರು ಅಲ್ಲೇ ಸಮೀಪದ ಹೊಂಡಕ್ಕೆ ಬಿತ್ತೆನ್ನಲಾಗಿದೆ. ಆಗ ಅದರಲ್ಲಿದ್ದ ಮೂವರು ಓಡಲು ಯತ್ನಿಸಿದಾಗ ಪೊಲೀಸರು ಬೆನ್ನಟ್ಟಿ ವಶಕ್ಕೆ ಪಡೆದುಕೊಂಡರು.
ನಂತರ ವಿಚಾರಿಸಿದಾಗ ಇವರು ಭಟ್ಕಳದಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರು, ನಾವುಂದ, ಮರವಂತೆ ಕಡೆಗಳಲ್ಲಿ ನಿಲ್ಲಿಸಲಾದ ಲಾರಿಗಳಿಂದ ಬ್ಯಾಟರಿಗಳನ್ನು ಕದ್ದಿದ್ದು, ಅವುಗಳನ್ನು ಮಾರಾಟ ಮಾಡಲು ಕುಂದಾಪುರ ಕಡೆಗೆ ಕಾರಿನಲ್ಲಿ ತೆಗೆದುಕೊಂಡು ಬರುತ್ತಿದ್ದಾರೆ ಎನ್ನ ಲಾಗಿದೆ. ಟವೇರಾ ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು ಅದನ್ನು ಪರಿಶೀಲಿಸಿದಾಗ ಒಳಗೆ ವಿವಿಧ ಕಂಪೆನಿಯ 7 ಬ್ಯಾಟರಿಗಳು ಪತ್ತೆಯಾಗಿವೆ.
ಈ ಬ್ಯಾಟರಿಗಳ ಒಟ್ಟು ವೌಲ್ಯ 70,000ರೂ. ಹಾಗೂ ಕಾರಿನ ವೌಲ್ಯ 4ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.