ಮನುಷ್ಯರ ಮಧ್ಯೆ ಇರುವ ನಂಬಿಕೆಯನ್ನು ಹೆಚ್ಚಿಸಬೇಕು: ಯು.ಟಿ.ಖಾದರ್

Update: 2017-02-24 16:05 GMT

ಕೊಣಾಜೆ, ಫೆ.24: ಅಂತರ್ಜಾಲದ ಇಂದಿನ ಯುಗದಲ್ಲಿ ಮನುಷ್ಯರ ಮಧ್ಯೆ ಇರುವ ನಂಬಿಕೆಗಿಂತಲೂ ಅಂತರ್ಜಾಲದ ಮೇಲಿನ ನಂಬಿಕೆಯೇ ಹೆಚ್ಚಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಆಧ್ಯಾತ್ಮಿಕವಾಗಿ ಮುಂದೆ ನಿಂತು ಕಾರ್ಯನಿರ್ವಹಿಸಿದರೆ ಅಂತರಂಗ ಸ್ವಚ್ಛಗೊಳಿಸಬಹುದು ಎಂದು ಆಹಾರ ಸಚಿವ ಯು.ಟಿ.ಖಾದರ್ ಅವರು ಹೇಳಿದರು.

ಅವರು ಇನೋಳಿಯ ದೇವಂದಬೆಟ್ಟದಲ್ಲಿರುವ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

  ಸುಖ, ಶಾಂತಿ, ದೈವ-ದೇವಸ್ಥಾನ ಬೇಕೆಂದು ಬಯಸುವ ಹಿಂದೂ ಸಮಾಜ ಇದಕ್ಕಾಗಿ ಜಾತಿಗಳ ಮದ್ಯೆ ಕಂದರ ಸೃಷ್ಟಿಸುವ ರಾಜಕೀಯ ಅನುದಾನದ ನಿರೀಕ್ಷೆಯಿಂದ ಹೊರಬಂದು ಒಗ್ಗಟ್ಟಾಗಬೇಕಿದೆ ಎಂದು ಸುಜೀರುಗುತ್ತುವಿನ ಉದ್ಯಮಿ ಐತಪ್ಪ ಆಳ್ವ ತಿಳಿಸಿದರು.

   ಧಾರ್ಮಿಕ ದತ್ತಿ ಇಲಾಖೆಯಡಿ ಅನುದಾನ ಪಡೆಯುವ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯಲ್ಲಿ ಹಿಂದುಳಿದಿದೆ,. ಇಂತಹ ದೇವಸ್ಥಾನಗಳ ಮಧ್ಯೆ ಗ್ರಾಮೀಣ ಭಾಗದಲ್ಲಿರುವ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಆದಾಯ 15 ಸಾವಿರ ಮಾತ್ರವಿದ್ದರೂ ಇಬ್ಬರು ಅರ್ಚಕರನ್ನು ನೇಮಿಸಿ ಪ್ರತಿದಿನ ಪೂಜೆ ನಡೆಸುತ್ತಿರುವುದು ಅಚ್ಚರಿಯೇ ಸರಿ. ಈ ವರ್ಷ ದತ್ತಿ ಇಲಾಖೆಯಡಿ ಇಲ್ಲದ ದೇವಸ್ಥಾನಗಳಿಗೂ ಸರ್ಕಾರದಿಂದ 1.20ಕೋಟಿ ಅನುದಾನ ನೀಡಲಾಗಿದೆ ಎಂದು ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಕೋಟೆಕಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಭಜನಾ ಸೇವಾಕರ್ತರಾದ ನಾರಾಯಣ ಶೆಟ್ಟಿ ಇನೋಳಿ, ಗಂಗಾಧರ ಜೋಷಿ ಸಂಪಿಗೆ, ಚಂದ್ರಹಾಸ ಕೊಣಾಜೆ, ವಾಸುದೇವ ನಾಯಕ್ ಇನೋಳಿ ಕಾಡಬೆಟ್ಟು ಹಾಗೂ ನಾರಾಯಣ ಪೂಜಾರಿ ಇನೋಳಿ ಕೋರ್ಯ ಇವರನ್ನು ಸನ್ಮಾನಿಸಲಾಯಿತು.

ಉರ್ವಸ್ಟೋರು ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಉಮರಬ್ಬ, ಬಂಟ್ವಾಳ ಭೂಅಭಿವೃದ್ಧಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ವೆಂಕಪ್ಪ ಕಾಜವ ಮಿತ್ತಕೋಡಿ, ಚಿಲಿಂಬಿ ಮಲರಾಯ ದೈವದ ಪಾತ್ರಿ ದೇವರಾಜ್ ಎಸ್.ಅಮೀನ್, ಉದ್ಯಮಿ ಸಂದೇಶ್ ಶೆಟ್ಟಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಟ್ರಸ್ಟಿ ಗೋಪಾಲ ಶೆಟ್ಟಿ ಬಾರ್ಲ ಮೊದಲಾದವರು ಉಪಸ್ಥಿತರಿದ್ದರು.

ದೇವಸ್ಥಾನದ ಮೊಕ್ತೇಸರ ಡಾ.ಸುಧಾರಾಮ ರೈ ಕೊಪ್ಪರಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀನಿವಾಸ ಇನೋಳಿ ಸನ್ಮಾನಿತರ ಪತ್ರ ವಾಚಿಸಿದರು. ರಾಜೇಶ್ ಶೆಟ್ಟಿ ಪಜೀರುಗುತ್ತು ಹಾಗೂ ರವಿ ರೈ ಪಜೀರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News