ಯಕ್ಷಗಾನ ಭಾಗವತಿಕೆ, ಹೆಜ್ಜೆಗಾರಿಕೆ ದಾಖಲೀಕರಣ ಸಮಾರೋಪ

Update: 2017-02-24 18:38 GMT

ಮಣಿಪಾಲ, ಫೆ.24: ಇಂದು ಯಕ್ಷಗಾನ ಕಲೆಯು ಸಾಕಷ್ಟು ಎತ್ತರಕ್ಕೆ ಬೆಳೆದಿವೆ. ಹಿಮ್ಮೇಳನದಲ್ಲಿ ಹೊಸ ಹೊಸ ಸಂಶೋಧನೆಗಳು ನಡೆದಿವೆ. ಅದೇ ರೀತಿ ಮುಮ್ಮೇಳದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಯಕ್ಷಗಾನ ಕಲೆಯಲ್ಲಿ ಇರುವಷ್ಟು ವೇಷಭೂಷಣ ನಾಟ್ಯಶಾಸ್ತ್ರದ ಬೇರೆ ಕಲೆಗಳಲ್ಲಿಲ್ಲ ಎಂದು ಶ್ರೀಕ್ಷೇತ್ರ ಕಟೀಲು ಅನುವಂಶಿಕ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಹೇಳಿದರು.

ಅವರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ವತಿಯಿಂದ ಮಣಿಪಾಲ ವಿಶ್ವವಿದ್ಯಾನಿಲಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಮಣಿಪಾಲದ ವ್ಯಾಲಿವ್ಯೆ ಹೊಟೇಲ್ ಸಭಾಂಗಣದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾದ ಯಕ್ಷಗಾನ ತೆಂಕು-ಬಡಗು ಹಾಗೂ ಮೂಡಲಪಾಯದ ಭಾಗವತಿಕೆ, ಹೆಜ್ಜೆಗಾರಿಕೆಗಳ ದಾಖಲೀಕರಣದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿ ಅಕಾಡಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಮಾತನಾಡಿ, ಪ್ರತಿಯೊಬ್ಬರಿಗೆ ನಮ್ಮ ಚರಿತ್ರೆಯ ಅರಿವು ಬಹಳ ಅಗತ್ಯವಾಗಿ ಇರಬೇಕು. ಆ ಕಾರಣಕ್ಕಾಗಿ ಯಕ್ಷಗಾನ ಕಲೆಯ ದಾಖಲೀಕರಣ ನಡೆಸಲಾಗುತ್ತಿದೆ. ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಯಕ್ಷಗಾನಗಳಿಗೆ ಅಪಚಾರ ಎಸಗುವ ರೀತಿಯಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಣಿಪಾಲ ವಿವಿಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಅಶೋಕ್ ಆಳ್ವ ಉಪಸ್ಥಿತರಿದ್ದರು.

ಅಕಾಡಮಿ ಸದಸ್ಯ ಸಂಚಾಲಕ ಪಿ.ಕಿಶನ್ ಹೆಗ್ಡೆ ಸ್ವಾಗತಿಸಿದರು. ಮಣಿಪಾಲ ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ವಂದಿಸಿದರು. ಪ್ರೊ.ಎಸ್.ವಿ.ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತೆಂಕು ಬಡಗು ಯಕ್ಷಗಾನ ಕೂಡಾಟ ‘ಬಬ್ರುವಾಹನ’ ಪ್ರದರ್ಶನ ಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News