ಕಪ್ಪ ಕಾಣಿಕೆಯ ಕಪ್ಪು ರಾಜಕೀಯ

Update: 2017-02-24 18:57 GMT

ತುಂಡರಸರು ತಮ್ಮ ಮೇಲಿನವರಿಗೆ ಕಪ್ಪ ಕಾಣಿಕೆಗಳನ್ನು ಪ್ರತಿ ವರ್ಷ ಒಪ್ಪಿಸುವುದು ಭಾರತದ ನೆಲದ ಸಂಪ್ರದಾಯ. ಪ್ರಜಾಸತ್ತೆ ಆಗಮಿಸಿದರೂ ಈ ಸಂಪ್ರದಾಯದಲ್ಲಿ ಮಾತ್ರ ಬದಲಾವಣೆಯಿಲ್ಲ. ಪ್ರಜಾಸತ್ತಾತ್ಮಕವಾಗಿಯೇ ಇದನ್ನು ಮುಂದುವರಿಸಿಕೊಂಡು ಬರಲಾಗಿದೆ. ರಾಷ್ಟ್ರೀಯ ಪಕ್ಷಗಳಲ್ಲಿ ವರಿಷ್ಠರಿಗೆ ಕಪ್ಪ ಕಾಣಿಕೆಗಳನ್ನು ನೀಡುತ್ತಲೇ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡು ಬಂದ ರಾಜ್ಯಮಟ್ಟದ ನಾಯಕರು ಹಲವರು. ಕರ್ನಾಟಕಕ್ಕೆ ಇದು ಹೊಸತಲ್ಲ. ಹೆಚ್ಚಿನ ನಾಯಕರು ತಮ್ಮ ಸೂಟ್‌ಕೇಸ್ ಗಾತ್ರದ ಮೂಲಕವೇ ತಮ್ಮ ವ್ಯಕ್ತಿತ್ವವನ್ನು ಮೇಲಿನವರಿಗೆ ಪರಿಚಯಿಸಿಕೊಳ್ಳುವುದು.

ರಾಜ್ಯದಲ್ಲಿ ರೆಡ್ಡಿ ಸಹೋದರರು ಬಿಜೆಪಿಯನ್ನು ಆಳುತ್ತಿದ್ದ ಸಂದರ್ಭದಲ್ಲಿ ಕೇಂದ್ರದ ನಾಯಕಿಯೊಬ್ಬರು ವರಲಕ್ಷ್ಮೀ ಹಬ್ಬಕ್ಕೆಂದು ಪ್ರತೀ ವರ್ಷ ಬಳ್ಳಾರಿಗೆ ಆಗಮಿಸುತ್ತಿದ್ದರು. ತನ್ನ ಇಬ್ಬರು ದತ್ತು ಪುತ್ರರ ತಲೆಯ ಮೇಲೆ ಕೈಯಿಟ್ಟು, ಈ ನಾಯಕಿ ಕೋಟಿ ಗಟ್ಟಲೆ ಹಣವನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಹೋಗುತ್ತಿದ್ದರು ಎನ್ನುವುದು ಮಾಧ್ಯಮಗಳಲ್ಲಿ ಸದಾ ಚರ್ಚೆಯ ಸುದ್ದಿಯಾಗಿರುತ್ತಿತ್ತು. ಯಾವಾಗ ರೆಡ್ಡಿ ಸಹೋದರರ ಕೊರಳಿಗೆ ಭ್ರಷ್ಟಾಚಾರದ ಉರುಳು ಬಿತ್ತೋ, ಅಲ್ಲಿಂದ ಈ ನಾಯಕಿ ಬಳ್ಳಾರಿಗೆ ಬರುವುದನ್ನು ನಿಲ್ಲಿಸಿ ಬಿಟ್ಟರು ಮತ್ತು ಅವರ ಜೊತೆಗಿರುವ ಸಂಬಂಧವನ್ನೂ ನಿರಾಕರಿಸಿ ಬಿಟ್ಟರು. ನೀಡುತ್ತಿದ್ದ ಕಪ್ಪ ನಿಂತ ಬಳಿಕ ಬಿಜೆಪಿಗೂ ಈ ಸಹೋದರರು ಬೇಡವಾದರು. ಇಂದು ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯಗಳಿಂದ ಕಪ್ಪ ಸಾಗುವುದು ಸಾಮಾನ್ಯವಾಗಿದೆ. ಇಂತಹ ಹೊತ್ತಿನಲ್ಲಿ ಬಿಜೆಪಿಯ ನಾಯಕರು ಕಾಂಗ್ರೆಸ್‌ನ ಕಪ್ಪ ಕಾಣಿಕೆಯ ಆರೋಪವನ್ನು ಹೊಸದೆಂಬಂತೆ ಮಾಡಿದ್ದಾರೆ. ಒಂದಾನೊಂದು ಕಾಲದಲ್ಲಿ ಬಳ್ಳಾರಿಯ ಒಡಲನ್ನು ತೋಡಿ, ದಿಲ್ಲಿಯ ಜನರಿಗೆ ಹಣವನ್ನು ಬಾಚಿ ಬಾಚಿ ಕೊಟ್ಟವರಿಗೆ ಇದೀಗ, ಅಂತಹ ಕಪ್ಪ ನೀಡುವುದು ಅಪರಾಧ ಎನ್ನುವುದು ಜ್ಞಾನೋದಯವಾಗಿದೆ. ನಿಜಕ್ಕೂ ಇದು ಸಂತೋಷದ ವಿಷಯವೇ ಆಗಿದೆ. ಅಷ್ಟೇ ಅಲ್ಲ, ರಾಜ್ಯ ಕಾಂಗ್ರೆಸ್‌ನ ವಿವಿಧ ಮುಖಂಡರು ತಮ್ಮ ವರಿಷ್ಠರಿಗೆ ಭಾರೀ ಕಪ್ಪವನ್ನು ನೀಡಿದ್ದಾರೆ ಎನ್ನುವ ಡೈರಿಯೊಂದನ್ನು ಹಿಡಿದುಕೊಂಡು ಅವರೀಗ ಕಾಂಗ್ರೆಸ್ ಸರಕಾರದ ಮೇಲೆ ಮುಗಿ ಬಿದ್ದಿದ್ದಾರೆ.

2016ರ ಮಾರ್ಚ್ 15ರಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ಮನೆಯಲ್ಲಿ ಅಧಿಕಾರಿಗಳಿಗೆ ಡೈರಿಯೊಂದು ಸಿಕ್ಕಿತ್ತೆನ್ನಲಾಗಿದೆ. ಅದರಲ್ಲಿ ಸಂಕೇತಾಕ್ಷರಗಳಲ್ಲಿ ಯಾರು ಯಾರು ಹಣ ನೀಡಿದ್ದಾರೆ ಮತ್ತು ಅದನ್ನು ಯಾರು ಯಾರಿಗೆ ನೀಡಿದ್ದಾರೆ ಎನ್ನುವ ವಿವರಗಳನ್ನು ಅವರು ಬರೆದಿಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಆರ್‌ಜಿ ಆಫೀಸ್ ಎಂದರೆ ರಾಹುಲ್ ಗಾಂಧಿ, ಎಸ್‌ಜಿ ಎಂದರೆ ಸೋನಿಯಾ ಗಾಂಧಿ, ಕೆಜೆಜಿ ಎಂದರೆ ಕೆ.ಜೆ. ಜಾರ್ಜ್, ಡಿಕೆಎಸ್ ಎಂದು ಡಿ.ಕೆ.ಶಿವಕುಮಾರ್ ಎಂದು ಹೆಸರಿನ ಒಗಟನ್ನೂ ಬಿಜೆಪಿ ನಾಯಕರೇ ಬಿಡಿಸಿದ್ದಾರೆ ಮತ್ತು ಈ ಕಾರಣಕ್ಕಾಗಿ ರಾಜ್ಯ ಸರಕಾರ ರಾಜೀನಾಮೆ ನೀಡಬೇಕು ಎಂದು ಗದ್ದಲ ಎಬ್ಬಿಸಿದ್ದಾರೆ. ಸಾಧಾರಣವಾಗಿ ವೀಡಿಯೊ ಸಹಿತ ದಾಖಲೆಗಳು ಸಿಕ್ಕಿದರೂ ರಾಜಕಾರಣಿಗಳು ಇಂದು ಜಪ್ಪೆಂದರೂ ರಾಜೀನಾಮೆ ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಪಕ್ಷಗಳ ನಾಯಕರೂ ತಮ್ಮ ಲಜ್ಜೆಯನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ ಡೈರಿಯೊಂದರಲ್ಲಿ ಸಿಕ್ಕಿರುವ ಮೂರು ಇಂಗ್ಲಿಷ್ ಅಕ್ಷರಗಳನ್ನು ಉಲ್ಲೇಖಿಸಿ ಒಂದು ಸರಕಾರದಿಂದ ರಾಜೀನಾಮೆ ಕೇಳುವುದೇ ಅತ್ಯಂತ ಹಾಸ್ಯಾಸ್ಪದ. ಇಲ್ಲಿ ಕಾಂಗ್ರೆಸ್ ನಾಯಕರು ದಿಲ್ಲಿ ವರಿಷ್ಠರಿಗೆ ಕಪ್ಪ ನೀಡಿರುವುದರ ಬಗ್ಗೆ ಯಾವ ಅನುಮಾನವೂ ಇಲ್ಲ ಮತ್ತು ಇಂತಹ ಗುಲಾಮಗಿರಿ ರಾಜಕಾರಣವನ್ನು ಎಲ್ಲ ಪಕ್ಷಗಳೂ ನಾಚಿಕೆಯಿಲ್ಲದೆ ಮಾಡಿಕೊಂಡು ಬರುತ್ತಿವೆ. ಆದರೆ ಕನಿಷ್ಠ ಬಲವಾದ ಸಾಕ್ಷವನ್ನಾದರೂ ಇಟ್ಟುಕೊಂಡು ಬಿಜೆಪಿ ಸರಕಾರದ ರಾಜೀನಾಮೆಗೆ ಒತ್ತಾಯಿಸಿದರೆ ಅದಕ್ಕೆ ಅರ್ಥವಿತ್ತು. ಗೋವಿಂದರಾಜು ಪಕ್ಷದ ಯಾವುದೇ ಪ್ರಮುಖ ಹುದ್ದೆಯನ್ನು ಹೊಂದಿದವರಲ್ಲ. ಹಾಗಿರುವಾಗ ಅವರ ಕೈಯಲ್ಲಿ ಕಳೆದ ವರ್ಷ ಸಿಕ್ಕಿದ ಡೈರಿಯಲ್ಲಿ ಇಂತಹದೊಂದು ಉಲ್ಲೇಖ ಇತ್ತು ಎನ್ನುವುದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಕಷ್ಟ. ಇಷ್ಟಕ್ಕೂ ತೆರಿಗೆ ಇಲಾಖೆ ಈ ದಾಳಿಯನ್ನು ನಡೆಸಿದೆ. ಡೈರಿ ತೆರಿಗೆ ಇಲಾಖೆಯ ಅಧಿಕಾರಿಗಳ ಕೈಸೇರಿದೆ ಎಂದ ಮೇಲೆ, ಅದರ ವಿವರಗಳು ಬಿಜೆಪಿ ನಾಯಕರಿಗೆ ದೊರಕಿದ್ದು ಹೇಗೆ? ಅಂದರೆ ಐಟಿ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡರ ನಡುವಿನ ಸಂಬಂಧವನ್ನು ಬೇಡಬೇಡವೆಂದರೂ ಇದು ಎತ್ತಿ ಹಿಡಿಯುತ್ತದೆ. ಇದು ಡೈರಿಯಲ್ಲಿರುವ ಅಂಶಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತದೆ.

ಡೈರಿಯೊಂದರಲ್ಲಿ ಯಾರದಾದರೂ ಹೆಸರುಗಳು ಉಲ್ಲೇಖವಾಗಿದೆಯೆಂದಾಕ್ಷಣ ಯಾರಾದರೂ ರಾಜೀನಾಮೆ ನೀಡಬೇಕಾದರೆ, ಮೊತ್ತ ಮೊದಲು ರಾಜೀನಾಮೆ ನೀಡಬೇಕಾದವರು ಪ್ರಧಾನಮಂತ್ರಿ ನರೇಂದ್ರ ಮೋದಿ. ಈಗಾಗಲೇ ಸಹಾರಾ-ಬಿರ್ಲಾ ಡೈರಿಯಲ್ಲಿ ಹಲವು ಬಿಜೆಪಿ ಮುಖ್ಯಮಂತ್ರಿಗಳ ಹೆಸರು ಪ್ರಸ್ತಾಪಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಈ ಆರೋಪವನ್ನು ಯಾವುದೇ ಬಿಜೆಪಿ ನಾಯಕರು ಗಂಭೀರವಾಗಿ ತೆಗೆದುಕೊಂಡಿಲ್ಲ. ಇಂತಹ ಆರೋಪವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದು ದೇಶಕ್ಕೆ ಕಲಿಸಿ ಕೊಟ್ಟವರೇ ಬಿಜೆಪಿ ಮುಖಂಡರು. ಅದರಲ್ಲೂ ಪ್ರಧಾನಿ ಮೋದಿ. ಅವರೇನಾದರೂ ಇಂತಹ ಆರೋಪಗಳಿಗೆ ತಲೆಬಾಗಿ ಈ ಹಿಂದೆ ರಾಜೀನಾಮೆ ನೀಡಿದ್ದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಅದನ್ನು ಅನುಸರಿಸಬೇಕಾಗುತ್ತಿತ್ತು. ಈ ಹಿಂದೆ ಎಲ್. ಕೆ. ಅಡ್ವಾಣಿಯವರು, ಹವಾಲಾ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದಾಗ ನೊಂದು ರಾಜೀನಾಮೆ ನೀಡಿರುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದೇ ಅಲ್ಲದೆ, ಅವರ ಮೇಲಿರುವ ಆರೋಪ ಮುಕ್ತವಾಗುವವರೆಗೆ ಅವರು ರಾಜಕೀಯದಲ್ಲಿ ನೇರವಾಗಿ ಭಾಗವಹಿಸಲಿಲ್ಲ. ನಿಜಕ್ಕೂ ಅಡ್ವಾಣಿಯ ಈ ಕ್ರಮ ಎಲ್ಲ ರಾಜಕಾರಣಿಗಳಿಗೂ ಮಾದರಿಯಾಗಬೇಕು. ಇಂತಹ ಡೈರಿಗಳಲ್ಲಿ ಅಸ್ಪಷ್ಟವಾಗಿ ಬರೆದಿರುವ ಹೆಸರು ಮತ್ತು ಸಂಖ್ಯೆಗಳು ರಾಜಕಾರಣಿಗಳ ಮೇಲಿರುವ ಆರೋಪವನ್ನು ಸಾಬೀತು ಮಾಡುವುದಿಲ್ಲ ಎನ್ನುವುದು ಈಗಾಗಲೇ ಹಲವು ಕೋರ್ಟ್ ತೀರ್ಪುಗಳಲ್ಲಿ ನಾವು ಕಂಡಿದ್ದೇವೆ. ಯಾವ ರೀತಿಯಲ್ಲೂ ಅದು ಬಲವಾದ ಸಾಕ್ಷವಾಗಿ ನಿಲ್ಲಲಾರದು ಎಂದ ಮೇಲೆ, ಈ ಡೈರಿಯನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರದ ರಾಜೀನಾಮೆಯನ್ನು ಕೇಳುವುದು, ಗದ್ದಲ ಎಬ್ಬಿಸುವುದು ಬಿಜೆಪಿ ನಾಯಕರ ಹತಾಶೆಯನ್ನು ತೋರಿಸುತ್ತದೆ.

ಇದೇ ಸಂದರ್ಭದಲ್ಲಿ ಈ ಕಪ್ಪ ರಾಜಕಾರಣ ನಾಡನ್ನು ಇನ್ನಷ್ಟು ಭ್ರಷ್ಟಾಚಾರದೆಡೆಗೆ ಒಯ್ಯುತ್ತಿದೆ ಎನ್ನುವುದು ಸತ್ಯ. ಈ ನಾಡಿನ ಜನರ ಹಣವನ್ನು ದೋಚಿ ಅವರು ತಮ್ಮ ವರಿಷ್ಠರಿಗೆ ಒಪ್ಪಿಸುತ್ತಿದ್ದಾರೆ. ಇದು ಪರೋಕ್ಷವಾಗಿ ಭ್ರಷ್ಟಾಚಾರ ನಡೆಸಲು ವರಿಷ್ಠರಿಂದ ಪಡೆದುಕೊಳ್ಳುವ ಪರವಾನಿಗೆಯ ದಾರಿಯೂ ಹೌದು. ಈ ಹಿಂದೆ ರೆಡ್ಡಿ ಸಹೋದರರು ಈ ಕಪ್ಪದ ಮೂಲಕ ಹೇಗೆ ಕರ್ನಾಟಕವನ್ನು ಸರ್ವನಾಶ ಮಾಡಿದರು ಎನ್ನುವುದನ್ನು ನಾವು ನೋಡಿದ್ದೇವೆ. ವರಿಷ್ಠರಿಗೆ ಸಲ್ಲಿಸುವ ಕಪ್ಪ ಪರೋಕ್ಷವಾಗಿ ಖೂಳರು, ಭ್ರಷ್ಟರಿಗೆ ರಾಜಕೀಯ ಶಕ್ತಿಯನ್ನು ಕೊಡುತ್ತದೆ. ಅವರಿಂದ ನಾಡು ಇನ್ನಷ್ಟು ಸಂಕಷ್ಟಕ್ಕೆ ಸಿಕ್ಕುತ್ತದೆ. ಆದುದರಿಂದ ಕನಿಷ್ಠ ಆತ್ಮಸಾಕ್ಷಿಯನ್ನು ಮುಂದಿಟ್ಟು ಕಾಂಗ್ರೆಸ್ ನಾಯಕರು ಆರೋಪಕ್ಕೆ ಸ್ಪಷ್ಟ ಉತ್ತರ ನೀಡಬೇಕಾಗಿದೆ. ಬಿಜೆಪಿ ಈ ನಾಡನ್ನು ದರೋಡೆ ಮಾಡಿತು ಎಂದು, ಜನರು ಆ ಪಕ್ಷವನ್ನು ಕಿತ್ತೊಗೆದು ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತಂದರು. ಬಿಜೆಪಿ ಮಾಡಿದುದನ್ನು ನಾವೂ ಮಾಡುತ್ತೇವೆ ಎಂದು ಕಾಂಗ್ರೆಸಿಗರು ಹೊರಟರೆ ಇತಿಹಾಸ ಪುನರಾವರ್ತನೆಯಾಗಬಹುದಾದ ಎಲ್ಲ ಸಾಧ್ಯತೆಗಳೂ ಇವೆ.                                                                                                                        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News